Advertisement

ಹುಂಚ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್‌ ಬೆಳಕಲ್ಲಿ ರೋಗಿಗಳಿಗೆ ಚಿಕಿತ್ಸೆ!

04:21 PM May 10, 2022 | Niyatha Bhat |

ರಿಪ್ಪನ್‌ಪೇಟೆ: ಸಮೀಪದ ಹುಂಚ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್‌ ಅವ್ಯವಸ್ಥೆ ಮತ್ತು ತುರ್ತು ಬ್ಯಾಟರಿ ಸೌಲಭ್ಯವಿಲ್ಲದೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೊಬೈಲ್‌ ದೀಪವೇ ಗತಿಯಾಗಿದೆ ಎಂದು ರೋಗಿಗಳು ಆರೋಪಿಸಿದ್ದಾರೆ.

Advertisement

ರಾಜ್ಯದ ಗೃಹ ಸಚಿವರ ಸ್ವಕ್ಷೇತ್ರ ಹುಂಚ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಳೆ- ಗಾಳಿ, ಗುಡುಗು- ಸಿಡಿಲು ಬಂದರೆ ಸಾಕು. ವಿದ್ಯುತ್‌ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ವಿದ್ಯುತ್‌ ಕೈಕೊಟ್ಟರೆ ಬದಲಿ ವ್ಯವಸ್ಥೆಗೆಂದು ಅಳವಡಿಸಲಾದ ಚಾರ್ಜರ್‌ ಬ್ಯಾಟರಿ ಸಹ ಕೆಟ್ಟು ಹೋಗಿದ್ದರೂ ಕೇಳುವವರಿಲ್ಲದಂತಾಗಿದೆ.

ಕಳೆದ ಕೆಲ ದಿನಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ ಭಾರೀ ಗಾಳಿ- ಗುಡುಗು- ಸಿಡಿಲು ಮಳೆಯ ಆರ್ಭಟದಿಂದಾಗಿ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಹಲವು ಕಡೆ ವಿದ್ಯುತ್‌ ತಂತಿಯ ಮೇಲೆ ಮರಗಳು ಬಿದ್ದು ಅವ್ಯವಸ್ಥೆಯಾಗಿದ್ದು ಬದಲಿ ವ್ಯವಸ್ಥೆಯ ಜನರೇಟರ್‌ ಸಹ ಕೆಟ್ಟು ಹೋಗಿ ರೋಗಿಗಳು ಪರದಾಡುವಂತಾಗಿದೆ.

ಕಾಯಿಲೆ ಯಾವಾಗ ಎಷ್ಟು ಹೊತ್ತಿಗೆ ಬರುತ್ತದೋ ಅಥವಾ ವಾಹನ ಅಪಘಾತಗಳು ಸಂಭವಿಸಿದರೆ ತುರ್ತು ಅಸ್ಪತ್ರೆಗೆ ಕರೆದುಕೊಂಡು ಹೋದರೆ ಕತ್ತಲೆಯಲ್ಲಿ ತುರ್ತು ಚಿಕಿತ್ಸೆ ನೀಡುವುದಾದರೂ ಹೇಗೆ ಸ್ವಾಮಿ ಎಂದು ಶುಶ್ರೂಷಕಿಯರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಅಲ್ಲದೆ ಇತ್ತೀಚೆಗೆ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಸೋಲಾರ್‌ ದೀಪ ಅಳವಡಿಸಿದ್ದರೂ ಅದು ಕೂಡ ನಾಮಕಾವಸ್ಥೆಗೆ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯರು ಕರೆಂಟ್‌ ಇಲ್ಲದೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೊಬೈಲ್‌ ಬೆಳಕಿನಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ.

Advertisement

ಇನ್ನಾದರೂ ಸಂಬಂಧಿಸಿದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು, ಕ್ಷೇತ್ರದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸರಿಪರಿಸಲು ಮುಂದಾಗುವರೇ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next