ಹೊಸದಿಲ್ಲಿ: ವಿರೋಧ ಪಕ್ಷಗಳ ಬಹಿಷ್ಕಾರದ ಕರೆ ನಡುವೆ ಭಾನುವಾರ ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದು, ” ಪ್ರಧಾನಿಯವರು ಸಂಸತ್ ಭವನದ ಉದ್ಘಾಟನೆಯನ್ನು ಪಟ್ಟಾಭಿಷೇಕವೆಂದು ಪರಿಗಣಿಸಿದ್ದಾರೆ ” ಎಂದು ವ್ಯಂಗ್ಯವಾಡಿದರು.
ಅಲ್ಲದೆ ‘ಸಂಸತ್ ಜನರ ಧ್ವನಿ’ ಎಂದಿದ್ದಾರೆ. ಸುಮಾರು 20 ವಿರೋಧ ಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿದೆ ಇರುವುದನ್ನು ಕಾರಣವಾಗಿರಿಸಿ ಬಹಿಷ್ಕಾರ ಮಾಡಿವೆ. ಉದ್ಘಾಟನೆಯನ್ನು ಪ್ರಜಾಪ್ರಭುತ್ವದ ಮೇಲೆ “ಗಂಭೀರ ಅವಮಾನ” ಮತ್ತು “ನೇರ ಆಕ್ರಮಣ” ಎಂದು ಕರೆದರು.
ಹೊಸ ಸಂಸತ್ ಭವನ ಉದ್ಘಾಟನೆಗೂ ಮುನ್ನ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಪ್ರಧಾನಿ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಗಣಪತಿ ಹೋಮವನ್ನು ನೆರವೇರಿಸಿದರು. ಪ್ರಧಾನಮಂತ್ರಿಯವರು ತಮಿಳುನಾಡಿನ ವಿವಿಧ ಅಧೀನಗಳ ಪ್ರಧಾನ ಅರ್ಚಕರಿಂದ ಆಶೀರ್ವಾದ ಪಡೆದರು ಮತ್ತು ನಂತರ ಹೊಸ ಸಂಸತ್ತಿನ ಕಟ್ಟಡದಲ್ಲಿ ಲೋಕಸಭಾ ಸ್ಪೀಕರ್ ಕುರ್ಚಿಯ ಬಳಿ ಸೆಂಗೋಲ್ ಅನ್ನು ಸ್ಥಾಪಿಸಿದರು.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತಮ್ಮ ಇತ್ತೀಚಿನ ಟ್ವಿಟ್ಟರ್ ಪೋಸ್ಟ್‌ನಲ್ಲಿ ಪಿಎಂ ಮೋದಿಯನ್ನು ‘ಸಂಸದೀಯ ಕಾರ್ಯವಿಧಾನಗಳನ್ನು ದ್ವೇಷಿಸುವ ಸ್ವಯಂಪ್ರೇರಿತ ಸರ್ವಾಧಿಕಾರಿ ಪ್ರಧಾನಿ’ ಎಂದು ಕರೆದಿದ್ದಾರೆ. ಅಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೊಸ ಸಂಸತ್ತಿನ ಉದ್ಘಾಟನೆಗೆ ಅವಕಾಶ ನೀಡದ ಕೇಸರಿ ಪಾಳೆಯದ ಮೇಲೆ ಮತ್ತೆ ದಾಳಿಯನ್ನು ಹೆಚ್ಚಿಸಿದ್ದಾರೆ.