ಚಿಕ್ಕಬಳ್ಳಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬ ನಿವೃತ್ತಿ ಬಳಿಕ ತಾನು ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್ ತೆರೆದು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಪ್ರಕರಣವನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆರೋಗ್ಯ ಇಲಾಖೆ ತಂಡ ಭೇದಿಸಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ನಕಲಿ ವೈದ್ಯ ಹಾಗೂ ನಿವೃತ್ತ ಡಿ ಗ್ರೂಪ್ ನೌಕರನನ್ನು ವೆಂಕಟಪ್ಪ ಎಂದು ಗುರುತಿಸಲಾಗಿದೆ. ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶನಿವಾರ ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದಾಗ ತಾಲೂಕಿನ ದಿಬ್ಬೂರಹಳ್ಳಿಯಲ್ಲಿ ಬಾಡಿಗೆ ಕಟ್ಟಡವನ್ನು ಪಡೆದು ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ.
ಕ್ಲಿನಿಕ್‌ಗೆ ಬೀಗ ಜಡಿದ ಅಧಿಕಾರಿಗಳು
ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂ ನೌಕರರಾಗಿ ಕೆಲಸ ಮಾಡುತ್ತಿದ್ದ ವೆಂಕಟಪ್ಪ, ನಿವೃತ್ತಿ ಹೊಂದಿದ ನಂತರ ಸಾದಲಿಯಲ್ಲಿ ನಕಲಿ ಕ್ಲಿನಿಕ್ ತೆರೆದಿದ್ದ. ಬಳಿಕ ಅಲ್ಲಿಂದ ದಿಬ್ಬೂರಹಳ್ಳಿಗೆ ಸ್ಥಳಾಂತರ ಮಾಡಿ ನಕಲಿ ಕ್ಲಿನಿಕ್ ತೆರೆದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಾನು ವೈದ್ಯನೆಂದು ಹೇಳಿಕೊಂಡು ಕ್ಲಿನಿಕ್‌ಗೆ ಬರುವ ಸಾರ್ವಜನಿಕರಿಗೆ ಅದರಲ್ಲೂ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ವೆಂಕಟಪ್ಪ ಚಿಕಿತ್ಸೆ ನೀಡಿ ಮಾತ್ರೆ, ಚುಚ್ಚುಮದ್ದು ನೀಡುತ್ತಿದ್ದನೆಂದು ಆರೋಗ್ಯಾಧಿಕಾರಿಗಳ ದಾಳಿ ವೇಳೆ ಕಂಡು ಬಂದಿದೆ.
ಕಾರ್ಯಾಚರಣೆ ವೇಳೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಯಶ್ವಂತ ಪ್ರಸಾದ್, ಆರೋಗ್ಯ ನಿರೀಕ್ಷಕ ದೇವರಾಜ್ ಸೇರಿದಂತೆ ಮತ್ತಿತರರು ಇದ್ದರು. ಈ ವೇಳೆ 20 ಕ್ಕೂ ಹೆಚ್ಚು ಸಾರ್ವಜನಿಕರು ಚಿಕಿತ್ಸೆ ಪಡೆಯಲು ನಕಲಿ ಕ್ಲಿನಿಕ್‌ನಲ್ಲಿ ಇದ್ದರೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.