Advertisement

ಸಚಿವರಿಂದ ಖಜಾನೆ ಲೂಟಿ: ಬಿಎಸ್‌ವೈ

03:01 PM Sep 14, 2017 | |

ವಿಜಯಪುರ: ನೀರಾವರಿ ಹೆಸರಿನಲ್ಲಿ ರಾಜ್ಯದ ಖಜಾನೆ ಲೂಟಿ ಮಾಡುತ್ತಿರುವ ಜಲ ಸಂಪನ್ಮೂಲ ಸಚಿವ ಡಾ|ಎಂ.ಬಿ. ಪಾಟೀಲ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವಿಫಲವಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

Advertisement

ಬುಧವಾರ ನಗರದ ಗುರುದತ್ತ ಮಂಗಲ ಭವನದಲ್ಲಿ ನಡೆದ ಪಕ್ಷದ ವಿಸ್ತಾರಕರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಚಿವ
ಎಂ.ಬಿ. ಪಾಟೀಲರು ಇಲಾಖೆ ಕೆಲಸಕ್ಕಿಂತ ಅದರಾಚೆಯ ಅನಗತ್ಯ ಕೆಲಸಗಳಲ್ಲೇತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ನೀರಾವರಿ ಯೋಜನೆಗಳ ಜಾರಿಗೆ ಕಾಯುತ್ತಿರುವ ರಾಜ್ಯದ ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.

ಸಚಿವ ಎಂ.ಬಿ. ಪಾಟೀಲರು ಇಲಾಖೆಯಲ್ಲಿ ನಡೆಸಿರುವ ಭ್ರಷ್ಟಾಚಾರವನ್ನು ಶೀಘ್ರದಲ್ಲೇ ದಾಖಲೆ ಸಮೇತ ಬಯಲಿಗೆಳೆಯುತ್ತೇವೆ. ಈ ದುರ್ಬಲ ಮಂತ್ರಿಯ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡಲು ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಆಕ್ಟೋಬರ್‌ 23ರಂದು 50 ಸಾವಿರ
ಜನರೊಂದಿಗೆ ವಿಜಯಪುರದಲ್ಲಿ ಬೃಹತ್‌ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ನಾನು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಕೃಷ್ಣಾ ನದಿ ಆಣೆಕಟ್ಟು ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಾರ್ಯಕ್ಕೆ ಸಂಬಂಧಿ ಸಿದಂತೆ 17,807 ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಿದ್ದೆ.ಆದರೆ ಸಂತ್ರಸ್ತ ಜಿಲ್ಲೆಯವರೇ ಆದ ಎಂ.ಬಿ. ಪಾಟೀಲ ಇದೀಗ ಜಲಸಂಪನ್ಮೂಲ ಖಾತೆ ವಹಿಸಿಕೊಂಡರೂ ಪುನರ್ವಸತಿ ಯೋಜನೆ ಕೈಗೆತ್ತಿಕೊಳ್ಳದೇ ಉತ್ತರ ಕರ್ನಾಟದ ಸಂತ್ರಸ್ತರನ್ನು ವಂಚಿಸಿದ್ದಾರೆ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಜಾರ್ಜ್‌ ಅವರ ಹೆಸರು ಕೇಳಿ ಬಂದಿರುವ ಕಾರಣ ಸಾಕ್ಷ್ಯ ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. 

Advertisement

ಸಚಿವ ಡಾ| ಎಂ.ಬಿ. ಪಾಟೀಲ ಹಾಗೂ ಕೆ.ಜೆ. ಜಾರ್ಜ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಮಹದಾಯಿ ವಿಷಯದಲ್ಲೂ ಸರ್ಕಾರಕ್ಕೆಗಂಭೀರತೆ ಇಲ್ಲ. ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ವಿನಾಕಾರಣ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ನ್ಯಾಯಾಧಿ ಕರಣದ ಹೊರಗೆ ವಿವಾದ ಬಗೆಹರಿಸಿಕೊಳ್ಳಲು ಸಿಎಂ ಮುಂದಾಗಬೇಕು. ಇನ್ನಾದರೂ ಕಾಲಹರಣ ಮಾಡದೇ ಮಹಾರಾಷ್ಟ್ರ,
ಗೋವಾ ರಾಜ್ಯದ ಪ್ರತಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ನಾವು ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಅವರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದರು.

ಮಾಜಿ ಸಚಿವರಾದ ಗೋವಿಂದ ಕಾರಜೋಳ,ಮುರುಗೇಶ ನಿರಾಣಿ, ಎಸ್‌.ಕೆ. ಬೆಳ್ಳುಬ್ಬಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ವಿಠಲ ಕಟಕದೊಂಡ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next