ಧಾರವಾಡ: ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಮೊಳಗಿಸಿದ್ದ ಪ್ರಕರಣದಲ್ಲಿ ಆರೋಪಿಗಳ ಜಾಮೀನಿಗೆ ನಿಯಮಗಳ ಅನ್ವಯ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಆರೋಪಿಗಳು ಮರಳಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರು ನ್ಯಾಯಾಲಯದ ಸಿಇಒ ಮೂಲಕ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಇಲ್ಲಿ ನಿಯಮಗಳ ಪಾಲನೆ ಆಗಿಲ್ಲವೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಅವರು ಪ್ರಕರಣದ ವಿಚಾರಣೆ ತಿರಸ್ಕರಿಸಿದರು. ಹೀಗಾಗಿ ಬೆಂಗಳೂರಿನಿಂದ ವಿದ್ಯಾರ್ಥಿಗಳ ಪರ ವಾದ ಮಂಡನೆಗೆ ಬಂದಿದ್ದ ವಕೀಲರು ಸ್ಥಳೀಯ ವಕೀಲರ ಪ್ರತಿಭಟನೆ ಎದುರಿಸಿ ಮರಳಿ ಹೋಗಬೇಕಾಯಿತು.
ಬೆಳಗ್ಗೆ ಹುಬ್ಬಳ್ಳಿಗೆ ಬಂದ ವಕೀಲರಾದ ನರೇಂದ್ರ, ಮೈತ್ರಿ ಸೇರಿ ನಾಲ್ವರು ವಕೀಲರು ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಪಡೆದು, ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬಂದರು. ಇಲ್ಲಿ ಪ್ರತಿಭಟನೆ ಕಾವು ಎದುರಿಸಿ ಪೊಲೀಸ್ ಭದ್ರತೆಯಲ್ಲಿಯೇ ನ್ಯಾಯಾಲಯದ ಆವರಣ ಪ್ರವೇಶಿಸಿ ಅರ್ಜಿ ಸಲ್ಲಿಸಿದರು. ಆದರೆ, ಕೋರ್ಟ್ ನಿಯಮದಂತೆ ಅರ್ಜಿಯನ್ನು ಕೋರ್ಟ್ ಸಿಇಒ ಮೂಲಕ ಸಲ್ಲಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದ್ದರಿಂದ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಮರಳಿ ಹಿಂಡಲಗಾ ಜೈಲಿನತ್ತ ಸಾಗಿದರು.
ಕಾರಿನ ಮೇಲೆ ಕಲ್ಲು, ಚಪ್ಪಲಿ ತೂರಾಟ: ದೇಶದ್ರೋಹ ಆರೋಪ ಹೊತ್ತಿ ರುವ ವಿದ್ಯಾರ್ಥಿಗಳ ಪರ ವಕಾ ಲತ್ತು ವಹಿಸಲು ನ್ಯಾಯಾಲಯದ ಆವರಣಕ್ಕೆ ಬಂದಿದ್ದ ಬೆಂಗಳೂರಿನ ವಕೀಲರ ತಂಡದ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಆರೋಪಿಗಳ ಪರ ವಕಾಲತ್ತು ವಹಿಸುವುದನ್ನು ಖಂಡಿಸಿದ ಸ್ಥಳೀಯ ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಪೊಲೀಸ್ ಭದ್ರತೆ ಇದ್ದರೂ ಕಾರಿನ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಯಿತು.