Advertisement

ನೀರು ನಿರ್ವಹಣೆಗೆ ಬಿಎಂಟಿಸಿ ಸಂಸ್ಕರಣೆ ನಡೆ

12:16 PM Apr 17, 2017 | |

ಬೆಂಗಳೂರು: ನಗರದೆಲ್ಲೆಡೆ ನೀರಿಗೆ ಹಾಹಾಕಾರ ಕೇಳಿಬರುತ್ತಿದೆ. ಆದರೆ, ಆರು ಸಾವಿರ ಬಸ್‌ಗಳ ಸ್ವತ್ಛತೆಗೆ ನಿತ್ಯ ಲಕ್ಷಾಂತರ ಲೀಟರ್‌ ನೀರು ಸುರಿಯುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಈ ಸಮಸ್ಯೆ ಇಲ್ಲ. ಲಭ್ಯವಿರುವ ನೀರನ್ನು ವ್ಯವಸ್ಥಿತವಾಗಿ ಬಳಸುತ್ತಿ­ರುವ ಬಿಎಂಟಿಸಿ ಪ್ರತಿನಿತ್ಯ ಎರಡೂವರೆ ಲಕ್ಷ ಲೀಟರ್‌ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುತ್ತಿದೆ. ಹೀಗಾಗಿ, ಸಂಸ್ಥೆಗೆ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ.  

Advertisement

ಬಿಎಂಟಿಸಿ ವ್ಯಾಪ್ತಿಯಲ್ಲಿ ಶಾಂತಿನಗರ ಸೇರಿದಂತೆ ಎಲ್ಲ 43 ಘಟಕಗಳಲ್ಲೂ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದ್ದು, ಬಳಕೆಯಾದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಈ ಮೂಲಕ ನಿತ್ಯ ಎರಡೂವರೆ ಲಕ್ಷ ಲೀಟರ್‌ ನೀರನ್ನು ಉಳಿತಾಯ ಮಾಡುತ್ತಿದೆ. ಇದು ಪ್ರತಿ ದಿನ ನಗರದಲ್ಲಿ ಸುಮಾರು 20ರಿಂದ 25 ಸಾವಿರ ಕುಟುಂಬಗಳಿಗೆ ಪೂರೈಕೆಯಾಗುವ ನೀರಿಗೆ ಸರಿಸಮವಾಗಿದೆ. 

ಸಂಸ್ಥೆಯಲ್ಲಿ ವೋಲ್ವೊ, ಸಾಮಾನ್ಯ ಸೇರಿದಂತೆ 6,400 ಬಸ್‌ಗಳಿವೆ. ಮೂಲಗಳ ಪ್ರಕಾರ ಒಂದೊಂದು ಡಿಪೋದಲ್ಲಿ 150ರಿಂದ 180 ಬಸ್‌ಗಳಿವೆ. ಇವುಗಳು ರಸ್ತೆಗಿಳಿಯುವ ಮುನ್ನ ಕಡ್ಡಾಯವಾಗಿ ನೀರಿನಿಂದ ವಾಷಿಂಗ್‌ ಮಾಡಲಾಗುತ್ತದೆ. ಪ್ರತಿ ಡಿಪೋದಲ್ಲಿ ಬಸ್‌ಗಳನ್ನು ಶುಚಿಗೊಳಿಸಲಿಕ್ಕಾಗಿಯೇ 6 ಸಾವಿರ ಲೀ. ನೀರು ಪೋಲಾಗುತ್ತದೆ. ಅಂದರೆ 2.58 ಲಕ್ಷ ಲೀ. ನೀರು ಬೇಕಾಗುತ್ತದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವಾಗ ಹನಿ ನೀರೂ ಅಮೂಲ್ಯ.

ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಈ ಸಂಸ್ಕರಣಾ ಘಟಕಗಳನ್ನು ವ್ಯವಸ್ಥಿತವಾಗಿ ಅನುಸರಿಸು­ತ್ತಿದ್ದು, ನೀರಿನ ಉಳಿತಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಹುತೇಕ ಎಲ್ಲ ಡಿಪೋಗಳಲ್ಲಿ ಕೊಳವೆಬಾವಿಗಳಿವೆ. ಅವುಗಳಿಂದ ಅಥವಾ ಜಲಮಂಡಳಿಯಿಂದ ಈ ಮೊದಲು ಬಸ್‌ ವಾಷಿಂಗ್‌ಗೆ ನೀರು ಪೂರೈಕೆ ಆಗುತ್ತಿತ್ತು. ಆದರೆ, ನೀರಿನ ಹಾಹಾಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಮರುಬಳಕೆ ವ್ಯವಸ್ಥೆ ಅಳವಡಿಸಲಾ­ಯಿತು.

ಮೊದಲಿನಿಂದಲೂ ಬಿಎಂಟಿಸಿಯಲ್ಲಿ ಈ ವ್ಯವಸ್ಥೆ ಇತ್ತು. ಈಗ ಅವುಗಳನ್ನು ನವೀಕರಿಸಿ, ಅತ್ಯಾಧುನಿಕ ಮಾದರಿಗಳಲ್ಲಿ ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಟೆಂಡರ್‌ ಕರೆಯ­ಲಾಗಿದೆ ಎಂದು ಬಿಎಂಟಿಸಿ ಮುಖ್ಯ ತಾಂತ್ರಿಕ ಅಧಿಕಾರಿ ಕೃಷ್ಣಯ್ಯ ಶೆಟ್ಟಿ ಸ್ಪಷ್ಟಪಡಿಸುತ್ತಾರೆ. ಒಟ್ಟಾರೆ ಮೂರು ಹಂತಗಳಲ್ಲಿ ಈ ನೀರು ಸಂಸ್ಕರಣೆಗೊಳ್ಳುತ್ತದೆ. ಬಸ್‌ ವಾಷಿಂಗ್‌ ಅನ್ನು ಅಟೋ­ಮೆಟಿಕ್‌ ಮಷಿನ್‌ ಮೂಲಕ ಮಾಡಲಾಗುತ್ತಿದೆ. ಹೀಗೆ ಶುಚಿಗೊಳಿಸಿದ ನಂತರ ಕಲುಷಿತಗೊಂಡ ನೀರು ನೇರವಾಗಿ ಸಂಸ್ಕರಣಾ ಘಟಕದ ಮೊದಲ ಟ್ಯಾಂಕ್‌ಗೆ ಹೋಗುತ್ತದೆ.

Advertisement

ಇಲ್ಲಿಗೆ ಬರುವ ನೀರು ಮಣ್ಣು, ಆಯಿಲ್‌ ಸೇರಿದಂತೆ ಮೋರಿ ನೀರಿನಂತೆ ಕಲುಷಿತಗೊಂಡಿರುತ್ತದೆ. ಅದಕ್ಕೆ ರಾಸಾಯನಿಕ ಪೌಡರ್‌ ಹಾಕಲಾಗುತ್ತದೆ. ಆಗ ಆ ನೀರು ಕೆಲಹೊತ್ತಿನಲ್ಲಿ ತಿಳಿಯಾಗುತ್ತದೆ. ನಂತರ ಮತ್ತೂಂದು ಟ್ಯಾಂಕ್‌ಗೆ ಹರಿಸಿ, ದ್ರವರೂಪದ ರಾಸಾಯನಿಕ ಅಂಶವನ್ನು ಮಿಶ್ರಣ ಮಾಡಲಾಗುವುದು. ಇದರಿಂದ ನೀರು ಶೇ. 60ರಷ್ಟು ಶುದ್ಧಗೊಳ್ಳುತ್ತದೆ. ತದನಂತರ 3ನೇ ಹಂತದಲ್ಲಿ ಬ್ಯಾಕ್ಟೀರಿಯಾ ನಾಶಕ್ಕಾಗಿ ಮತ್ತೂಂದು ಹಂತದ ಕೆಮಿಕಲ್‌ ಹಾಕಲಾಗುತ್ತದೆ.

ಇಲ್ಲೂ ಅವ್ಯವಹಾರ?
ನೀರಿನ ಸಂಸ್ಕರಣಾ ಘಟಕಗಳ ನಿರ್ವಹಣೆಯಲ್ಲೂ ಬಿಎಂಟಿಸಿಯಲ್ಲಿ ಅಕ್ರಮದ ವಾಸನೆ ಬರುತ್ತಿದೆ! ಸಂಸ್ಕರಣಾ ಘಟಕಗಳಿಗೆ ರಾಸಾಯನಿಕ ಪದಾರ್ಥ ಪೂರೈಕೆ ಗುತ್ತಿಗೆ ಖಾಸಗಿ ಕಂಪನಿಗೆ ನೀಡಲಾಗಿತ್ತು. ಆದರೆ, ಆ ಕಂಪನಿ, ಐದು ವಿಭಾಗಗಳಿಗೆ ಒಂದೊಂದು ರೀತಿಯ ಬಿಲ್‌ ಹಾಕು ತ್ತಿತ್ತು. ಇದರಿಂದ ಬಿಎಂಟಿಸಿಗೆ ನಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ 43 ಡಿಪೋಗಳಿಗೆ ಒಂದೇ ಮಾದರಿಯನ್ನು ಅನುಸರಿಸುವ ಸಂಬಂಧ ಹೊಸದಾಗಿ ಟೆಂಡರ್‌ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಮಳೆ ನೀರು ಕೊಯ್ಲೂ ಇದೆ
ಬಿಎಂಟಿಸಿಯ ಎಲ್ಲ ಡಿಪೋಗಳಲ್ಲೂ ಮಳೆ ನೀರು ಕೊಯ್ಲು ಕೂಡ ಇದೆ. ಹೀಗೆ ಸಂಗ್ರಹವಾಗುವ ನೀರನ್ನು ಡಿಪೋ­ಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ಮರುಪೂರಣ ಹಾಗೂ ಮತ್ತಿತರ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಆದರೆ, ಇವುಗಳಲ್ಲಿ ಕೆಲವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಇದೆ. ಈ ಮಧ್ಯೆ ಮಳೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ನೀರಿನ ಸಂಗ್ರಹ ಆಗಿಲ್ಲ. 

ಕ್ವಾರ್ಟಸ್‌ಗೆ ಪೂರೈಸಲಿ
ಮಳೆನೀರು ಕೊಯ್ಲು ವ್ಯವಸ್ಥೆ ಮತ್ತು ನೀರಿನ ಸಂಸ್ಕರಣಾ ಘಟಕಗಳಿಂದ ಲಭ್ಯವಾಗುವ ನೀರನ್ನು ಬರೀ ಬಸ್‌ಗಳ ವಾಷಿಂಗ್‌ಗೆ ಸೀಮಿತಗೊಳಿಸಬಾರದು. ಬಿಎಂಟಿಸಿ ಸಿಬ್ಬಂದಿ ಕ್ವಾರ್ಟಸ್‌ಗಳಿವೆ. ಡಿಪೋಗಳಲ್ಲಿ ಮೆಕಾನಿಕ್‌ ವಿಭಾಗಗಳು, ಶೌಚಾಲಯಗಳು, ಬಸ್‌ ಬಿಡಿಭಾಗಗಳ ಸ್ವತ್ಛತೆಗೂ ಇದೇ ನೀರನ್ನು ಬಳಸಿದರೆ ಹೆಚ್ಚು ಉಪಯುಕ್ತ ಆಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನೀರಿನ ಸಮಸ್ಯೆಯೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ, ಇಷ್ಟೊಂದು ಹಾಹಾಕಾರದ ನಡುವೆಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲಾಗಿದೆ. ಇದಕ್ಕಾಗಿ ಮಳೆನೀರು ಕೊಯ್ಲು, ಸಂಸ್ಕರಣೆ ಮೂಲಕ ನೀರಿನ ಮರುಬಳಕೆ ಮಾಡುತ್ತಿದೆ. ಅಲ್ಲದೆ, ಜನಪ್ರತಿ­ನಿಧಿಗಳ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ­ಗಳನ್ನೂ ತೆರೆಯಲಾಗುತ್ತಿದೆ. ಬಹು­ ತೇಕ ಎಲ್ಲ ಕಡೆಗೂ ಈ ಘಟಕಗಳಿದ್ದು, ಇಲ್ಲದಿರುವ ಕಡೆ ತೆರೆಯಲು ಶಾಸಕರು, ಸಂಸದರ ಅನುದಾನಕ್ಕೆ ಮನವಿ ಮಾಡಲಾಗಿದೆ. 
-ನಾಗರಾಜು ಯಾದವ, ಅಧ್ಯಕ್ಷರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next