ಕೊಪ್ಪಳ: ಬಹು ನಿರೀಕ್ಷಿತ ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಗೆ ಇನ್ನೇನು ಇದೇ ತಿಂಗಳಲ್ಲಿ ಚಾಲನೆ ದೊರೆಯಲಿದೆ ಎನ್ನುವ ನಿರೀಕ್ಷೆಯ ಬೆನ್ನಲ್ಲೇ ಮತ್ತೆ ಕೆಲವೊಂದು ಆಪಾದನೆ ಕೇಳಿ ಬಂದಿವೆ. ಬೆಟಗೇರಿ ಜನತೆ ಮತ್ತೆ ಸಭೆ ನಡೆಸಿ ಗ್ರಾಮಕ್ಕೆ ನೀರು ಕೊಟ್ಟು ಮುಂದೆ ಹೋಗಿ ಎನ್ನುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಮತ್ತೆ ಯೋಜನೆ ಕಗ್ಗಂಟ್ಟಾಗುವ ಲಕ್ಷಣ ಗೋಚರಿಸುತ್ತಿದೆ.
ತುಂಗಭದ್ರಾ ಹಿನ್ನೀರಿನ ಸಮೀಪದಲ್ಲಿನ ಅಳವಂಡಿ-ಬೆಟಗೇರಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿ ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬಂದರೂ ನಾಲ್ಕೆ ೖದು ವರ್ಷಗಳಿಂದ ಇದಕ್ಕೆ ಶಕ್ತಿ ಬಂದಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಹಲವು ಪ್ರಯತ್ನದ ಫಲವಾಗಿ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು, 88 ಕೋಟಿ ರೂ. ಅನುದಾನವನ್ನೂ ಮಂಜೂರು ಮಾಡಿಸಿದ್ದಲ್ಲದೇ, ಈಗಾಗಲೆ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೆಲವೇ ಕಾಮಗಾರಿ ನಡೆಯಬೇಕಿದ್ದು, ಶಾಸಕ ಹಿಟ್ನಾಳ ಸಹಿತ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೇ, ಜೂನ್ ತಿಂಗಳಲ್ಲಿಯೇ ಯೋಜನೆಗೆ ಚಾಲನೆ ನೀಡುವ ಕುರಿತು ಭರವಸೆ ನೀಡಿದ್ದಾರೆ.
ಗ್ರಾಮದಲ್ಲಿ ಡಂಗೂರ: ಈ ಬೆಳವಣಿಗೆ ಬೆನ್ನಲ್ಲೇ ಬೆಟಗೇರಿ ಗ್ರಾಮಸ್ಥರು ಶನಿವಾರ ರಾತ್ರಿ ಡಂಗೂರ ಸಾರಿಸಿ ರವಿವಾರ ಏತ ನೀರಾವರಿ ಯೋಜನೆಯ ಕುರಿತು ಚರ್ಚೆ ನಡೆಸಿದ್ದಾರೆ. ಈ ಯೋಜನೆಯಿಂದ ನಮಗೆ ಅನ್ಯಾಯವಾಗುತ್ತಿದೆ. ಶಾಸಕ ಹಿಟ್ನಾಳ ಅವರು ಗ್ರಾಮದ ಸೀಮಾಗೆ ನೀರು ಹರಿಸುವ ಭರವಸೆ ನೀಡಿದ್ದಾರೆ. ಆದರೆ ಪೈಪ್‌ಲೈನ್ ಅಳವಡಿಸಿದ್ದು ಬಿಟ್ಟರೆ ರೈತರ ಜಮೀನಿಗೆ ನೀರು ಹರಿಸುವ ಕುರಿತು ಪೂರ್ವ ಯೋಜನೆಯಿಲ್ಲ. ಕಾಟಾಚಾರಕ್ಕೆ ಎಂಬಂತೆ ಯೋಜನೆ ನಡೆಸಿದ್ದು, ಮುಂದಿನ ಹಳ್ಳಿಗಳಿಗೆ ಇದರ ಅನುಕೂಲವಾಗಲಿದೆಯೇ ವಿನಃ ನಮಗೆ ನೀರು ಹರಿಯಲ್ಲ ಎನ್ನುವ ಮಾತನ್ನಾಡಿದ್ದಾರೆ.
ಮೊದಲು ನಮಗೆ ನೀರು ಕೊಡಲಿ:
ಶಾಸಕ ಹಿಟ್ನಾಳ ಮಾತಿನಂತೆ ಮೊದಲು ಸೀಮಾ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಿದ್ದಾರೆ. ಆದರೆ ಸ್ಲೀವ್ ವಾಲ್ಗೆ ನೀರು ಹರಿಸಿಯೇ ಮುಂದಿನ ಗ್ರಾಮಕ್ಕೆ ನೀರು ಕೊಂಡೊಯ್ಯಬೇಕು. ಅಲ್ಲಿಯವರೆಗೂ ನಾವು ಯೋಜನೆಗೆ ಚಾಲನೆ ಮಾಡಲು ಬಿಡುವುದಿಲ್ಲ. ಈ ಯೋಜನೆಯಲ್ಲಿ ಬೆಟಗೇರಿಗೆ ಪ್ರತ್ಯೇಕ ಸ್ಲೀವ್ ವಾಲ್ನ ಡಿಪಿಆರ್ ಸೇರ್ಪಡೆಯಾಗಿಲ್ಲ. ಇದರ ಬಗ್ಗೆ ಗೊಂದಲವಿದೆ. ಡಿಪಿಆರ್ ಸಿದ್ಧಪಡಿಸಿ ಅನುಮೋದನೆ ಪಡೆದಿರುವ ಕುರಿತು ದಾಖಲೆ ತೋರಿಸಲಿ. ನಂತರವೇ ಈ ಯೋಜನೆಗೆ ಚಾಲನೆಗೆ ಅವಕಾಶ ನೀಡಲಿದ್ದೇವೆ. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡಲಿದ್ದೇವೆ ಎನ್ನುವ ನಿರ್ಣಯಕ್ಕೆ ಜನತೆ ಬಂದಿದ್ದಾರೆ.
ಇಷ್ಟು ದಿನಗಳ ಕಾಲ ಸುಮಗವಾಗಿ ನಡೆದಿದ್ದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ಮತ್ತೆ ಕಗ್ಗಂಟಿನ ರೂಪ ಪಡೆದುಕೊಳ್ಳುತ್ತಿದೆ. ರವಿವಾರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ನೀರಾವರಿ ಯೋಜನೆ ರಾಜಕೀಯ ರೂಪ ಪಡೆದುಕೊಂಡಿದ್ದು, ಕೈ-ಕಮಲ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ.
•ದತ್ತು ಕಮ್ಮಾರ