Advertisement

ಅಸಮಾಧಾನ ತಣಿಸಲು ವಿದೇಶ ಪ್ರವಾಸ?

10:39 PM Oct 29, 2019 | Lakshmi GovindaRaju |

ಬೆಂಗಳೂರು: ಮುನಿಸಿಕೊಂಡಿರುವ ತಮ್ಮ ಪಕ್ಷದ ಶಾಸಕರ ಅಸಮಾಧಾನ ತಣಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ವಿದೇಶ ಪ್ರವಾಸ ಕರೆದೊಯ್ಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ ಸದಸ್ಯರನ್ನು ಮಲೇಷಿಯಾ ಪ್ರವಾಸಕ್ಕೆ ಕರೆದೊಯ್ದು ಅಲ್ಲಿ ಅವರ ಜತೆ ಮುಖಾಮುಖೀ ಮಾತುಕತೆ ನಡೆಸಿ ಸಮಸ್ಯೆ ಸರಿಪಡಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

Advertisement

ಶಾಸಕರು-ಪರಿಷತ್‌ ಸದಸ್ಯರು ಒಪ್ಪಿದರೆ ನ.3 ರಿಂದ 6 ರವರೆಗೆ ಮಲೇಷಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಶಾಸಕರ ಜತೆಗಿನ ಮಲೇಷಿಯಾ ಪ್ರವಾಸ ಕೇವಲ ವದಂತಿ. ಆ ರೀತಿಯ ಯಾವುದೇ ಪ್ರವಾಸ ನಿಗದಿಯಾಗಿಲ್ಲ ಎಂದು ಎಚ್‌. ಡಿ. ಕುಮಾರಸ್ವಾಮಿ ಆಪ್ತ ವಲಯ ಹೇಳಿದೆ. ಜೆಡಿಎಸ್‌ನ ಹಲವು ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರು ಬಿಜೆಪಿ ಹಾಗೂ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ.

ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಕೆಲವರು ಬಿಜೆಪಿಗೆ, ಗುಬ್ಬಿ ಶ್ರೀನಿವಾಸ್‌ ಹಾಗೂ ವಿಧಾಪರಿಷತ್‌ ಸದಸ್ಯ ಕಾಂತರಾಜ್‌ ಜತೆಗೂಡಿ ಕೆಲವರು ಕಾಂಗ್ರೆಸ್‌ಗೆ ಹೋಗಲಿದ್ದಾರೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿದೆ. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಶಾಸಕರು ಹೋಗದಂತೆ ತಡೆಯಲು ಹಾಗೂ ಪಕ್ಷದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಹಾಗೂ ಒಗ್ಗಟ್ಟು ಪ್ರದರ್ಶಿಸಲು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಕೆಲವು ಶಾಸಕರು ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದ್ದರು. ಬಸವರಾಜ ಹೊರಟ್ಟಿ ಅವರು ಬಹಿರಂಗ ವಾಗಿಯೇ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಬೇಸರ ಹೊರಹಾಕಿದ್ದರು. ಇದಾದ ನಂತರ ಕುಮಾರಸ್ವಾಮಿಯವರು ನನ್ನ ನಾಯಕತ್ವ ಬೇಡ ಎನ್ನುವುದಾದರೆ ಬೇರೆಯ ವರನ್ನು ನಾಯಕರನ್ನಾಗಿ ಮಾಡಿಕೊಳ್ಳಲಿ ಎಂದು ಹೇಳಿದ್ದರು. ಆ ನಂತರ ಬಸವರಾಜ ಹೊರಟ್ಟಿ ಅವರು ನಾನು ನಾಯಕತ್ವ ಪ್ರಶ್ನೆ ಮಾಡಿಲ್ಲ ಎಂದು ಹೇಳಿದ್ದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಯಾರಲ್ಲೂ ಬೇಸರವಿಲ್ಲ, ಎಲ್ಲರನ್ನೂ ನಾನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದರು. ಬಿಜೆಪಿ ಸರ್ಕಾರ ಪತನವಾಗಲು ಬಿಡುವುದಿಲ್ಲ, ಕೀಲಿ ಕೈ ನನ್ನ ಬಳಿ ಇದೆ ಎಂಬ ಕುಮಾರಸ್ವಾಮಿಯವರ ಇತ್ತೀಚಿಗಿನ ಹೇಳಿಕೆ ಬಿಜೆಪಿಯತ್ತ ಚಿತ್ತ ಹರಿಸಿರುವ ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಎಂಬ ಮಾತುಗಳು ಕೇಳಿಬಂದಿತ್ತು. ಈಗ ವಿದೇಶ ಪ್ರವಾಸದ ಮಾತು ಕೇಳಿಬರುತ್ತಿದ್ದು, ಶಾಸಕರ ವಿಶ್ವಾಸಗಳಿಸಲು ಅವರು ಮಾಡುತ್ತಿರುವ ಯತ್ನ ಎಂದು ವ್ಯಾಖ್ಯಾನಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next