Advertisement

ಬಂದ್‌ಗೆ ಪ್ರಯಾಣಿಕರು ಸುಸ್ತೋ ಸುಸ್ತು

07:34 PM Apr 08, 2021 | Team Udayavani |

ಯಾದಗಿರಿ: ರಾಜ್ಯದಲ್ಲಿ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆ ಬಸ್‌ ನಿಲ್ದಾಣಗಳೆಲ್ಲ ಬಿಕೋ ಎನ್ನುತ್ತಿದ್ದರೆ, ಇನ್ನೊಂದೆಡೆ ನೆರೆ ರಾಜ್ಯ ತೆಲಂಗಾಣದ ಸಾರಿಗೆ ಕೆಲವು ವಾಹನಗಳು ಸಂಚರಿಸಿದ್ದು ಕಂಡು ಬಂತು.

Advertisement

ಮುಷ್ಕರ ಹಿನ್ನೆಲೆ ಯಾದಗಿರಿ ವಿಭಾಗದ 317 ಮಾರ್ಗಗಳಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಸೇವೆ ನೀಡಲಿಲ್ಲ. ಅಲ್ಲದೆ ಕೊರೊನಾ ಮಾರ್ಗಸೂಚಿಯಂತೆ ಜನರು ಒಂದೆಡೆ ಸೇರುವುದು, ಪ್ರತಿಭಟನೆಗೆ ನಿಷೇಧ ಇರುವುದರಿಂದ ಸಾರಿಗೆ ಇಲಾಖೆ ನೌಕರರು ಮನೆಗಳಲ್ಲಿಯೇ ಉಳಿದಿದ್ದರು. ಮುನ್ನೆಚ್ಚರಿಕೆಯಾಗಿ ಬಸ್‌ ನಿಲ್ದಾಣಗಳಲ್ಲಿ ಪೊಲೀಸ್‌ ಇಲಾಖೆ ಬಂದೋಬಸ್ತ್ ಕಲ್ಪಿಸಿತ್ತು.

ಸಾರಿಗೆ ವ್ಯವಸ್ಥೆಯಿಲ್ಲದೇ ಸಾರ್ವಜನಿಕರು ತೀವ್ರ ಪರದಾಡುವಂತಾಗಿತ್ತು. ರಾಜ್ಯದ ಬಸ್ ಗಳ ಮೂಲಕ ದೂರದ ಊರುಗಳಿಗೆ ತೆರಳಬೇಕಿದ್ದ ಜನರು ಮರಳಿ ಬರುವುದು ಹೇಗೆ? ಎಂದು ಚಿಂತೆಯಲ್ಲಿ ಮುಳುಗಿದ್ದರು. ನಂತರ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಪುನಃ ಖಾಸಗಿ ಆಟೋಗಳ ಮೂಲಕ ಗ್ರಾಮಗಳಿಗೆ ಸೇರಿದರು.

ಯಾದಗಿರಿ ಮತ್ತು ಗುರುಮಠಕಲ್ ಮಾರ್ಗದಲ್ಲಿ ಹೈದರಾಬಾದ್‌, ಪರಗಿ, ಕೊಡಂಗಲ್‌, ಗುರುಮಠಕಲ್‌ ಹಾಗೂ ಯಾದಗಿರಿ ಮಾರ್ಗವಾಗಿ ತೆಲಂಗಾಣದ
ಕೆಲವು ವಾಹನಗಳು ಸಂಚರಿಸಿ ನೆರೆ ರಾಜ್ಯದಿಂದ ಪ್ರಯಾಣಿಕರು ರಾಜ್ಯ ಪ್ರವೇಶಿಸಲು ಅನುಕೂಲವಾಯಿತು. ಇನ್ನು ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಖಾಸಗಿ ಟಂಟಂ ಆಟೋ, ಕ್ರೂಸರ್‌ ಅವಲಂಬಿಸಿದ್ದರು.ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ವಾಡಿ, ಗುರುಮಠಕಲ್‌, ಸೈದಾಪುರ, ವಡಗೇರಾ ಹೀಗೆ ಹಲವೆಡೆ 150ರಿಂದ 200ರಷ್ಟು ಖಾಸಗಿ ವಾಹನಗಳು ಸಾರ್ವಜನಿಕರಿಗೆ ಸೇವೆ ನೀಡಿರುವ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next