Advertisement
ಮಂಗಳೂರಿನಿಂದ ಖಾಸಗಿ ವಾಹನ ಮಾಡಿ ಕೊಂಡು ಹೊರಟ ನಾವು ಮಂತ್ರಾಲಯಕ್ಕೆ ಹೋಗುವ ದಾರಿಯಲ್ಲಿ ಅಧೋನಿ ಎಂಬಲ್ಲಿ ಇಳಿದು ವಿಜಯದಾಸರ ಕಟ್ಟೆಯಲ್ಲಿ ದಾಸವರೇಣ್ಯರಾದ ಶ್ರೀ ವಿಜಯದಾಸರು ಕುಳಿತು ತಪಃಗೈದು ದೇವರಲ್ಲಿ ಐಕ್ಯರಾದರು ಎಂಬ ಪ್ರತೀತಿ ಇರುವ ವಿಜಯದಾಸರ ಕಟ್ಟೆಗೆ ಭೇಟಿ ನೀಡಿದೆವು. ಅಲ್ಲಿ ಸ್ವಲ್ಪ ಹೊತ್ತು ಭಜನೆ ಮಾಡಿ ಅನಂತರ ರಾಮ- ಲಕ್ಷ್ಮಣರು ಸೀತೆಯೊಂದಿಗೆ ತಂಗಿದ್ದ ಮಂಗಾಪುರಕ್ಕೆ ಭೇಟಿ ಕೊಟ್ಟು ಅಲ್ಲಿಂದ ಮಂತ್ರಾಲಯಕ್ಕೆ ಬಂದೆವು. ಇಲ್ಲಿ ಗುರುರಾಯರ ದರ್ಶನ ಪಡೆದು ಬಳಿಕ ಅಲ್ಲಿಯೇ ಇರುವ ಪಂಚಮುಖಿ, ಬಿಚ್ಚಾಲಿಗೆ ಭೇಟಿ ಕೊಟ್ಟೆವು.
ಯಾಗಂಟಿ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿಯ ಪುಷ್ಕರಿಣಿ ಕೂಡ ಗೋಪುರಗಳಿಂದ ಕೂಡಿದ್ದು, ನೋಡಲು ಆಕರ್ಷಣೀಯವಾಗಿದೆ. ವೈಕುಂಠದಿಂದ ಲಕ್ಷ್ಮೀಯನ್ನು ಅರಸುತ್ತಾ ಬಂದ ನಾರಾಯಣ ಪ್ರಥಮ ಹೆಜ್ಜೆಯನ್ನು ಇಲ್ಲಿ ಇಟ್ಟನಂತೆ ಎಂಬ ಪ್ರತೀತಿ ಇದೆ. ಇಲ್ಲಿ ವೆಂಕಟೇಶ ತಪಃಗೈದ ಗುಹಾಲಯ ಹಾಗೂ ಅದರಲ್ಲಿ 108 ಹೆಜ್ಜೆಗಳ ಗುರುತು ಕಾಣಬಹುದಾಗಿದೆ. ಮುಂದೆ ಅಗಸ್ತ್ಯ ಋಷಿಗಳು ತಪಃಗೈದ ಗುಹೆ, ರಾಮ ಮಂದಿರ, ಉಮಾಮಹೇಶ್ವರೀ ದೇವಸ್ಥಾನಗಳನ್ನು ನೋಡಿ ಬಂದೆವು.
Related Articles
Advertisement
ಮರು ದಿನ ಬೆಳಗ್ಗೆ ಪ್ರಾತಃ ವಿಧಿಗಳನ್ನು ಮುಗಿಸಿ ನರಸಿಂಹ ದೇವರ ದರ್ಶನಗೈಯಲು ಹೊರಟೆವು. ಗರುಡಾದ್ರಿ- ವೇದಾದ್ರಿ ಪರ್ವತಗಳ ಮಧ್ಯದಲ್ಲಿ ಬಹಳ ಇಕ್ಕಟ್ಟಾದ, ಬಂಡೆಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ಸುಮಾರು ಎರಡೂವರೆ ಕಿ.ಮೀ. ದೂರ, ಅಲ್ಲಲ್ಲಿ ದಾರಿ, ಮತ್ತೆ ಮೆಟ್ಟಿಲು ಹೀಗೆ 700 ಮೆಟ್ಟಿಲುಗಳನ್ನು ಹತ್ತಿ ಜ್ವಾಲಾ ನರಸಿಂಹನ ದರ್ಶನ ಪಡೆದೆವು. ನಡೆಯಲಾಗದವರಿಗೆ ಡೋಲಿ ವ್ಯವಸ್ಥೆ ಇಲ್ಲಿದ್ದು, ನಡೆದುಕೊಂಡು ಬರುವವರಿಗೆ ದೊಡ್ಡ ದೊಣ್ಣೆಯನ್ನು ಕೊಡುತ್ತಾರೆ.
ದಟ್ಟ ಅರಣ್ಯದ ಮಧ್ಯೆ ಇರುವ ದೇವಸ್ಥಾನ ಪ್ರಾಚೀನವಾಗಿದ್ದು, ನೋಡಲು ಗುಹೆಯಂತಿದೆ. ಇಲ್ಲಿಗೆ ಹೋಗುವ ದಾರಿಯಲ್ಲಿ ಶ್ರೀ ರಾಮಾನುಜಾಚಾರ್ಯ ವೇದ ಪಾಠ ಶಾಲೆ, ಭಾರ್ಗವ ನರಸಿಂಹ, ವರಾಹ, ಪಾವನ ನರಸಿಂಹ ಮೊದಲಾದವುಗಳನ್ನು ಕಾಣಬಹುದು. ಇಲ್ಲಿ ರಕ್ತಕುಂಡ ಎಂಬ ಬಾವಿಯಿದೆ. ಜ್ವಾಲಾ ನರಸಿಂಹನನ್ನು ನೋಡಲು ಹೋಗುವ ದಾರಿಯಲ್ಲಿ ಭವನಾಶಿನಿ ಎಂಬ ನದಿಯ ನೀರು ತಲೆಗೆ ಬೀಳಿಸಿಕೊಂಡೇ ಸಾಗ ಬೇಕು. ದಾರಿ ಯುದ್ದಕ್ಕೂ ಊಟ, ವಸ ತಿಯ ವ್ಯವಸ್ಥೆಯ ಜವಾಬ್ದಾರಿಯನ್ನು ಕೆಲವರು ವಹಿಸಿಕೊಂಡಿದ್ದರಿಂದ ಯಾವುದೇ ತೊಂದರೆ ಇಲ್ಲದೆ ನಾವು ಮರಳಿ ಬಂದೆವು.
ರೂಟ್ ಮ್ಯಾಪ್· ಮಂಗಳೂರಿನಿಂದ ಅಹೋ ಬಿಲಕ್ಕೆ ಸುಮಾರು 683 ಕಿ.ಮೀ. ದೂರ
· ಖಾಸಗಿ ವಾಹನ, ಬಸ್, ರೈಲಿನ ವ್ಯವಸ್ಥೆ ಇದೆ.
· ಪ್ರವಾಸ ಹೊರಡುವಾಗ ಸಾಕಷ್ಟು ತಿಂಡಿ ತಿನಿಸುಗಳನ್ನು ಕಟ್ಟಿಕೊಂಡು ಹೋಗುವುದು ಉತ್ತಮ.
· ಊಟ, ವಸತಿಯ ಕುರಿತು ಮೊದಲೇ ಬುಕ್ಕಿಂಗ್ ಮಾಡಿದರೆ ಉತ್ತಮ.
· ಹೆಚ್ಚು ನಡೆಯಬೇಕಿರುವುದರಿಂದ ಇದಕ್ಕೆ ಮೊದಲೇ ಸಿದ್ಧತೆ ಮಾಡಿಕೊಂಡಿರಬೇಕು. ಸುಮಿತ್ರಾ ಆಚಾರ್ಯ, ಬಿಜೈ