ನವದೆಹಲಿ: ಕೋವಿಡ್ 19 ಸೋಂಕಿನಿಂದಾಗಿ ಉಂಟಾದ ಆರ್ಥಿಕ ಹೊಡೆತವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಣ್ಣ ಉದ್ಯಮಿಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ ಮಹಿಳೆಯರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಐದು ಕಂತುಗಳಲ್ಲಿ ಹಲವು ಯೋಜನೆ ಘೋಷಿಸಿದ್ದು, ಸೋಮವಾರ(ಅಕ್ಟೋಬರ್ 12, 2020) ಮುಂಬರುವ ಹಬ್ಬದ ಸೀಸನ್ ನಿಟ್ಟಿನಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನು ಉತ್ತೇಜಿಸುವ ನೆಲೆಯಲ್ಲಿ ಎಲ್ ಟಿಸಿ ನಗದು ವೋಚರ್ ಯೋಜನೆ ಹಾಗೂ ಹಬ್ಬದ ಮುಂಗಡ ಯೋಜನೆ ಘೋಷಿಸಿದ್ದಾರೆ.
ಸಂಘಟಿತ ವಲಯದ ಉದ್ಯೋಗಿಗಳು ಹೆಚ್ಚಳವಾಗಿದ್ದು, ಉಳಿತಾಯ ಹೆಚ್ಚಳವಾಗಲಿದೆ. ಈ ಹಿನ್ನೆಲೆಯಲ್ಲಿ ಇಂತಹ ಜನರ ಬೇಡಿಕೆಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸರ್ಕಾರಿ ನೌಕರರಿಗೆ ಹತ್ತು ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಹಣವನ್ನು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ರುಪೇ ಕಾರ್ಡ್ ರೂಪದಲ್ಲಿ ಹತ್ತು ಸಾವಿರ ರೂಪಾಯಿ ಮುಂಗಡ ಹಣ ಲಭ್ಯವಾಗಲಿದ್ದು, 2021ರ ಮಾರ್ಚ್ 31ರವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು ಹತ್ತು ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ. ಕೇಂದ್ರ ಸರ್ಕಾರ ಇದಕ್ಕಾಗಿ 4 ಸಾವಿರ ಕೋಟಿ ರೂಪಾಯಿ ವ್ಯಯಿಸುತ್ತಿರುವುದಾಗಿ ತಿಳಿಸಿದರು.
ಎಲ್ ಟಿಸಿ ನಗದು ವೋಚರ್ ಯೋಜನೆಯಡಿ ಸರ್ಕಾರಿ ನೌಕರರು ರಜೆಯ ನಗದು ಪಡೆಯುವ ಅವಕಾಶ ಇದೆ. ಎಲ್ ಟಿಸಿ ನಗದು ವೋಚರ್ ಯೋಜನೆ ಮೂಲಕ ಮೂರು ಸೌಲಭ್ಯ ಪಡೆಯಬಹುದಾಗಿದೆ. ಪ್ರಯಾಣ ದರ ತೆರಿಗೆ ರಹಿತವಾಗಿರುತ್ತದೆ. ವಿಮಾನ ಅಥವಾ ರೈಲು ಪ್ರಯಾಣದ ದರ ದಿನದ ಲೆಕ್ಕದಲ್ಲಿ ಮರುಪಾವತಿಗೆ ಹಾಗೂ 10ದಿನಗಳ ಸಂಬಳ ಸಹಿತ ರಜೆ ಸಿಗಲಿದೆ.