ಬೆಂಗಳೂರು: ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ, ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಸ ಕೈಗೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಸೆಪ್ಟಂಬರ್ 10ರಿಂದ 15ರವರೆಗೆ ಉತ್ತರ ಕರ್ನಾಟಕದ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಜನತಾದರ್ಶನ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಾರಗಳ ಕಾಲ ಉತ್ತರ ಕರ್ನಾಟಕದಲ್ಲೇ ಇರುತ್ತೇನೆ. ಈ ಅವಧಿಯಲ್ಲಿ ಆ ಭಾಗದ ಅಭಿವೃದ್ಧಿ ವಿಚಾರಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸುತ್ತೇನೆ. ಅವಕಾಶ ಸಿಕ್ಕಲ್ಲಿ ಜನರ ಅಹವಾಲುಗಳನ್ನು ಸಹ ಆಲಿಸುತ್ತೇನೆ ಎಂದರು.
ಗ್ರಾಮ ವಾಸ್ತವ್ಯ ಸದ್ಯಕ್ಕಿಲ್ಲ: ನಾನು ಈ ಹಿಂದೆ ಸಿಎಂ ಆಗಿದ್ದಾಗ ಆರಂಭಿಸಿದ್ದ ಯಶಸ್ವಿ ಜನತಾ ದರ್ಶನ ಕಾರ್ಯಕ್ರಮ ಇಂದು ಅಧಿಕೃತವಾಗಿ ಮತ್ತೆ ಆರಂಭಿಸಿದ್ದೇನೆ. ಇನ್ನು ಮುಂದೆ ಬೆಂಗಳೂರಿನಲ್ಲಿ ಇದ್ದಾಗ ಪ್ರತಿ ಶನಿವಾರ ಜನತಾ ದರ್ಶನ ನಡೆಸುತ್ತೇನೆ. ಇನ್ನು ಮುಂದೆ ನನ್ನ ದಿನಚರಿ ಬದಲಾಯಿಸಿಕೊಳ್ಳುತ್ತೇನೆ. ವಾರದಲ್ಲಿ ಒಂದು ವಿಧಾನಸೌಧದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ತಿಂಗಳಲ್ಲಿ ಒಂದು ದಿನ ಜಿಲ್ಲಾ ಕೇಂದ್ರಗಳಿಗೆ ಭೇಟಿ ಕಾರ್ಯಕ್ರಮ ಇಟ್ಟುಕೊಳ್ಳುತ್ತೇನೆ. ನನ್ನ ಭೇಟಿ ವೇಳೆ ವಿಶೇಷವಾಗಿ ಆಧುನಿಕ ಕೃಷಿ ಪದ್ದತಿಯ ಬಗ್ಗೆ ಅರಿವು ಮೂಡಿಸಲು ಸಮಯ ಮೀಸಲಿಡುತ್ತೇನೆ. ಗ್ರಾಮ ವಾಸ್ತವ್ಯ ಮಾಡಬೇಕು ಅಂದುಕೊಂಡಿದ್ದೇನೆ. ಆದರೆ, ಇದಕ್ಕೆ ನನ್ನ ವೈದ್ಯರು ಇನ್ನೂ ಅನುಮತಿ ಕೊಟ್ಟಿಲ್ಲ. ವೈದ್ಯರು ಅನುಮತಿ ಕೊಟ್ಟರೆ ಗ್ರಾಮ ವಾಸ್ತವ್ಯದ ಬಗ್ಗೆಯೂ ಆಲೋಚಿಸುತ್ತೇನೆ ಎಂದು ತಿಳಿಸಿದರು.