ನವದೆಹಲಿ: ಪರಸ್ಪರ ಪ್ರೀತಿಸುವ ಎರಡು ಹೃದಯಗಳಿಗೆ ನಂಬಿಕೆಯೇ ಒಂದು ದೊಡ್ಡ ಶಕ್ತಿ. ನಂಬಿಕೆಯಿಂದಲೇ ಇಬ್ಬರು ಬದುಕಿನ ಬಗ್ಗೆ ಬಣ್ಣ ಬಣ್ದದ ಕನಸು ಕಾಣುತ್ತಾರೆ. ಏನೇ ಆಗಲಿ ಒಂದಾಗಿ ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ನಂಬಿಕೆಯಿಂದ. ಈ ಮಾತನ್ನು ಹೇಳುವುದಕ್ಕೊಂದು ಕಾರಣವಿದೆ.
ಹನ್ನಾ ಮತ್ತು ಚಾರ್ಲಿ ಇಬ್ಬರು ಪ್ರೀತಿಸುವ ಮನಸ್ಸುಗಳು. ವೃತ್ತಿಯಲ್ಲಿ ಟ್ರಾವಲ್ ಬ್ಲಾಗರ್ ಗಳು. ಯಾವ ಸ್ಥಳಕ್ಕೂ ಹೋದರೂ ಅಲ್ಲಿನ ಆಚಾರ- ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಳ್ಳುವ ಹ್ಯಾಪಿ ಕಪಲ್ಸ್. ಈ ಸುಂದರ ಜೋಡಿಗೆ ಅದು ಯಾರ ದೃಷ್ಟಿ ಬಿತ್ತೋ ಏನೋ, ಹನ್ನಾಗೆ ಕ್ಯಾನ್ಸರ್ ಕಾಯಿಲೆ ಒಕ್ಕರಿಸುತ್ತದೆ.
ದಿನ ಕಳೆದಂತೆ ಹನ್ನಾಳ ಆರೋಗ್ಯ ಹದಗೆಡುತ್ತದೆ. ಹನ್ನಾ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿ ಅವರು ನಾಲ್ಕನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅಷ್ಟು ನೋವಿನಲ್ಲೂ ಹನ್ನಾ ಅವರಿಗೆ ತನ್ನ ಸಂಗಾತಿ ಚಾರ್ಲಿ ಅವರು ಒಂದು ಮಾತು ಕೊಡುತ್ತಾರೆ. ಒಂದು ಸಲಿ ನಿನ್ನ ಚಿಕಿತ್ಸೆ( (ಕೀಮೋಥೆರಪಿ) ಆದ ಬಳಿಕ ನಿನ್ನ ಕನಸಿನ ಸ್ಥಳ ಕಪಾಡೋಸಿಯಾ (Cappadocia) ದಲ್ಲಿ ಹಾರುವ ಬಲೂನ್ ಗಳನ್ನು ತೋರಿಸುತ್ತೇನೆ ಎಂದು ಧೈರ್ಯ ತುಂಬಿ ಪ್ರೀತಿಯಿಂದ ಅಪ್ಪಿಕೊಂಡು ಮಾತು ಕೊಡುತ್ತಾರೆ.
ಹನ್ನಾ ಅವರು ಕ್ಯಾನ್ಸರ್ ನಿಂದ ಚಿಕಿತ್ಸೆ ಪಡೆದು ಗೆದ್ದು ಬರುತ್ತಾರೆ. ಸಾವು – ನೋವಿನ ನಡುವಿನ ಹೋರಾಟ ಮಾಡಿ, ಕೀಮೋಥೆರಪಿ ಮುಗಿಸಿ ವಾಪಾಸ್ ಬಂದು ತನ್ನ ಸಂಗಾತಿಯನ್ನು ಅಪ್ಪಿಕೊಂಡು ಸಂತಸ ಪಡುತ್ತಾರೆ.
ತನ್ನ ಹುಡುಗಿಗೆ ಮಾತು ಕೊಟ್ಟ ಹಾಗೆ ಚಾರ್ಲಿ ಟರ್ಕಿಯಲ್ಲಿರುವ ಕಪಾಡೋಸಿಯಾಕ್ಕೆ ಪಯಾಣ ಬೆಳೆಸುತ್ತಾರೆ. ತಾವು ಇಬ್ಬರು ಭೇಟಿ ನೀಡುವ ತಾಣವನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಹಾರುವ ಬಲೂನ್ ಗಳನ್ನು ನೋಡುತ್ತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು “ನಾಲ್ಕು ಬಾರಿಯ ಟ್ರಿಪ್ ಕೋವಿಡ್ ಹಾಗೂ ಕ್ಯಾನ್ಸರ್ ನಿಂದ ರದ್ದಾದ ಬಳಿಕ, ಅಂತಿಮವಾಗಿ ನಾವು ನಮ್ಮ ಲಿಸ್ಟ್ ನಲ್ಲಿರುವ ಮತ್ತೊಂದು ಸ್ಥಳಕ್ಕೆ ಬಂದಿದ್ದೇವೆ ಎಂಥಾ ಅದ್ಭುತ ಸೌಂದರ್ಯ ಇದು” ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಹನ್ನಾ ಅವರು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ, ಪ್ರವಾಸ ಹೊರಡಲು ಇರುವ ಟಿಕೆಟ್ ಹಾಗೂ ಬಲೂನ್ ಗಳನ್ನು ನೋಡುತ್ತಾ ಕೂರುವ ಬಗ್ಗೆ ತೋರಿಸಲಾಗಿದೆ. ವಿಡಿಯೋ 2.3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 14 ಸಾವಿರಕ್ಕೂ ಹೆಚ್ಚಿನ ಮಂದಿ ಲೈಕ್ ಮಾಡಿದ್ದಾರೆ.
ಕ್ಯಾನ್ಸರ್ ಗೆದ್ದು, ತನ್ನ ಸಂಗಾತಿಯೊಂದಿಗೆ ಕನಸಿನ ಯಾನವನ್ನು ಮಾಡಿರುವ ಹನ್ನಾರ ಲೈಫ್ ಜರ್ನಿ ಬಗ್ಗೆ ನೆಟ್ಟಿಗರು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.