ಕಲಬುರಗಿ: ಅಪಘಾತದಲ್ಲಿ ನೊಂದವರಿಗೆ ತುರ್ತು ಚಿಕಿತ್ಸೆ ಒದಗಿಸಲು ಅನುವಾಗುವಂತೆ ನಗರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಟ್ರಾಮಾ ಸೆಂಟರ್ ನಿರ್ಮಿಸಲಾಗುತ್ತಿದ್ದು, ನಿರ್ಮಾಣ ಕಾರ್ಯ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ತಾಲೂಕಿನ ನಂದೂರ (ಬಿ) ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ 2.25 ಕೋಟಿ ರೂ. ಅಂದಾಜು ವೆಚ್ಚದ ನೂತನ ಪ್ರಾಥಮಿಕ ಆರೋಗ್ಯ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಆಸ್ಪತ್ರೆ ಹಾಗೂ ಕಿದ್ವಾಯಿ ಸ್ಮಾರಕ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲಾಗಿದೆ.
ಎರಡು ಆಸ್ಪತೆಗಳಲ್ಲಿ ಎಲ್ಲ ಬಿಪಿಎಲ್ ಚೀಟಿದಾರರಿಗೆ ಮತ್ತು ಎಸ್‌ಸಿ-ಎಸ್‌ಟಿ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಅದಲ್ಲದೇ ಎಪಿಎಲ್ ಕಾರ್ಡುದಾರರಿಗೂ ಚಿಕಿತ್ಸಾ ವೆಚ್ಚದ ಶೇ. 70ರಷ್ಟು ರಿಯಾಯಿತಿ ನೀಡಲಾಗುವುದು ಹೇಳಿದರು. ಕರ್ತವ್ಯ ಲೋಪ ಮಾಡುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಜನರಿಗೆ ಪ್ರಾಮಾಣಿಕವಾಗಿ ಆರೋಗ್ಯ ಸೇವೆ ಒದಗಿಸಲು ಬದ್ಧರಾಗಬೇಕು. ಕರ್ತವ್ಯಕ್ಕೆ ಹಾಜರಾಗದ ನಂದೂರ(ಬಿ) ಕೇಂದ್ರದ ವೈದ್ಯರ ಬಗ್ಗೆ ಬಂದಿರುವ ಆರೋಪದ ಕುರಿತು ಜಿಲ್ಲಾ ಆರೋಗ್ಯಾಧಿಧಿಕಾರಿಗಳು ಗಮನಹರಿಸಿ ನೋಟಿಸ್ ನೀಡಬೇಕು ಎಂದು ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮಾತನಾಡಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ತಮ್ಮ ತಮ್ಮ ಕಾರ್ಯಸ್ಥಾನಗಳಲ್ಲೇ ವಾಸ್ತವ್ಯ ಮಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಮೂಲಕ ವೈದ್ಯ ವೃತ್ತಿ ಘನತೆ ಕಾಪಾಡಬೇಕು ಎಂದು ಹೇಳಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಜಿಪಂ ಸದಸ್ಯ ಶರಣಗೌಡ ದೌಲತರಾವ ಪಾಟೀಲ, ನಂದೂರ(ಬಿ) ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಕಟ್ಟಿಮನಿ, ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ಗಣ್ಯರಾದ ಶಾಂತಕುಮಾರ ಪಾಟೀಲ, ವಿಜಯಕುಮಾರ, ಜಿ. ರಾಮಕೃಷ್ಣ, ಡಾ| ರಜನೀಶ ಪಟೇಲ್, ಮೃತ್ಯುಂಜಯ ಸ್ವಾಮಿ,
ಶರಣು ಕಣ್ಣಿ, ಲಿಂಗರಾಜ ತಾಡಪಳ್ಳಿ, ಶರಣಪ್ಪ ಸಾಹುಕಾರ, ವೇದಮೂರ್ತಿ ಗಂಗಾಧರ, ಜಯದೇವ ಹೃದ್ರೋಗ ಆಸ್ಪತ್ರೆ ಡಾ| ರಶೀದ್, ತಾಲೂಕು ಆರೋಗ್ಯಾಧಿಕಾರಿ ಡಾ| ರಾಜಕುಮಾರ ಕುಲಕರ್ಣಿ ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕೀಟನಾಶಕ ಅಧಿಕಾರಿ ಚಾಮರಾಜ ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು.