Advertisement

ತ್ರಾಸಿ: ಅವೈಜ್ಞಾನಿಕ ಕಾಮಗಾರಿಯಿಂದ ಹೆಚ್ಚುತ್ತಿರುವ ಅಪಘಾತ

12:03 PM Jan 03, 2021 | Team Udayavani |

ಕುಂದಾಪುರ, ಜ. 2: ಬೈಂದೂರು- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಜಂಕ್ಷನ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇದೆ. ಆದರೂ ಸಂಬಂಧಪಟ್ಟ ಹೆದ್ದಾರಿ ಇಲಾಖೆಯಾಗಲಿ, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯಾಗಲಿ ಈ ಬಗ್ಗೆ ಯಾವುದೇ ಗಮನವೇ ಕೊಡುತ್ತಿಲ್ಲ. ಇತ್ತೀಚೆಗೆ ಕಾಟಾಚಾರದ ಕಾಮಗಾರಿ ಮಾಡಿ ಹೋಗಿದ್ದು, ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದಾಗಿ ಸಾರ್ವಜನಿಕರು ದೂರಿದ್ದಾರೆ.

Advertisement

ಇತ್ತೀಚೆಗೆ ನಡೆದ ಅಪಘಾತವೊಂದರ ಬಳಿಕ ಸ್ಥಳೀಯರೆಲ್ಲ ಸೇರಿ ಪ್ರತಿಭಟಿಸಿದ್ದಲ್ಲದೆ, ಸ್ಥಳಕ್ಕೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯವರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳು ಬಂದು ಪರಿಶೀಲನೆ ನಡೆಸಿ, ದುರಸ್ತಿ ಪಡಿಸಬೇಕು ಎನ್ನುವುದಾಗಿ ಪಟ್ಟು ಹಿಡಿದಿದ್ದರು. ಆಗ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ಕೊಟ್ಟಿದ್ದು, ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಆ ನೆಲೆಯಲ್ಲಿ ಎರಡು ದಿನಗಳ ಹಿಂದೆ ಇಲ್ಲಿ ಬೇರೆಲ್ಲೋ ಉಳಿದ ಡಾಮರು ಹುಡಿಯನ್ನು ಇಲ್ಲಿ ತಂದು ಹಾಕಿ ಹೋಗಿದ್ದು, ಇದರಿಂದ ಏನೇನು ಪ್ರಯೋಜನ ಇಲ್ಲದಂತಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಸುಗಮ ವ್ಯವಸ್ಥೆ ಬೇಕು :

ಕೆಲವು ದಿನಗಳ ಹಿಂದೆ ಇಲ್ಲಿ ರಸ್ತೆ ಒಂದು ಬದಿ ಡಾಮರು ಹಾಕಿ ಹೋಗಿದ್ದಾರೆ. ಅದು ಯಾಕೆ ಹಾಕಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ನಮಗೆ ಇಲ್ಲಿ ಬಹಳ ಮುಖ್ಯವಾಗಿ ಡಿವೈಡರ್‌ ವಿಸ್ತ ರಣೆ  ಆಗಬೇಕು. ಬೀದಿ ದೀಪದ ವ್ಯವಸ್ಥೆ ಬೇಕು. ಪಾದಚಾರಿಗಳಿಗೆ ರಸ್ತೆ ದಾಟಲು ಸುಗಮವಾದ ವ್ಯವಸ್ಥೆ ಬೇಕು. ಈ ಬಗ್ಗೆ ಕೇಳಿದರೆ ನಮ್ಮ ಯಂತ್ರಗಳೆಲ್ಲ ಕಾರವಾರದಲ್ಲಿದೆ ಎನ್ನುತ್ತಾರೆ ಎಂದು ಸ್ಥಳೀಯರಾದ ಸಂತೋಷ್‌ ಪೂಜಾರಿ ಹೇಳುತ್ತಾರೆ.

ಪಾದಚಾರಿಗಳ ಪಾಡು… :

Advertisement

ಇಲ್ಲಿ ಮೊವಾಡಿ ಕಡೆ ಅಥವಾ ತ್ರಾಸಿ ಕಡೆಯಿಂದ ಆಚೆ ಕಡೆಗೆ ರಸ್ತೆ ದಾಟುವವರ ಜನರ ಪಾಡಂತೂ ಹೇಳತೀರದಾಗಿದೆ. ವೇಗವಾಗಿ ವಾಹನಗಳು ಬರುತ್ತಿರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡೇ ರಸ್ತೆ ದಾಟುವಂತಾಗಿದೆ.  ಇತ್ತೀಚೆಗೆ ನಡೆದ ಅಪಘಾತವೊಂದರ ಬಳಿಕ ಸ್ಥಳೀಯರೆಲ್ಲ ಸೇರಿ ಪ್ರತಿಭಟ ನೆ ಯನ್ನೂ ಮಾಡಿ ದ್ದರು. ಆದರೆ ಇದ ರಿಂದ ಶಾಶ್ವತ ಕಾಮ ಗಾರಿ ಆಗಲೇ ಇಲ್ಲ.

ತಿಂಗಳೊಳಗೆ ಅಧಿಕಾರಿಗಳ ಸಭೆ :

ತ್ರಾಸಿ ಜಂಕ್ಷನ್‌ನಲ್ಲಿನ ಸಮಸ್ಯೆ ಸೇರಿದಂತೆ ಕುಂದಾಪುರ – ಬೈಂದೂರಿನ ಹೆದ್ದಾರಿಯ ಅನೇಕ ಕಡೆಗಳಲ್ಲಿ ಕೆಲವೊಂದು ಕುಂದು ಕೊರತೆಗಳಿದ್ದು, ಅವುಗಳನ್ನು ಪರಿಹರಿಸುವ ಕುರಿತಂತೆ ತಿಂಗಳೊಳಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಅಧಿಕಾರಿಗಳ ಸಭೆ ಕರೆಯಲಾಗುವುದು.  – ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಅವೈಜ್ಞಾನಿಕ ಕಾಮಗಾರಿ :

ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ  ತ್ರಾಸಿಯ ಜಂಕ್ಷನ್‌ ಅವೈಜ್ಞಾನಿಕವಾಗಿದ್ದು, ಇಲ್ಲಿ ತ್ರಾಸಿಯಿಂದ ಮೊವಾಡಿ ಕಡೆಗೆ ಸಂಚರಿಸುವ ವರಿಗೆ ಹಾಗೂ ಆ ಕಡೆಯಿಂದ ತ್ರಾಸಿಗೆ ಬರುವವರಿಗೆ ತೊಂದರೆಯಾಗುತ್ತಿದೆ.  ಡಿವೈಡರ್‌ ಅಷ್ಟೇನೂ ಅಗಲವಿಲ್ಲ. ಆದರೆ ಇಲ್ಲಿ ಬಸ್‌ ಅಥವಾ ಮೀನಿನ ಲಾರಿಗಳು ಡಿವೈಡರ್‌ ಕ್ರಾಸಿಂಗ್‌ ಬಳಿ ನಿಂತು ರಸ್ತೆ ದಾಟುವುದು ಅಸಾಧ್ಯ. ಸರ್ವಿಸ್‌ ರಸ್ತೆಯೂ ಇಲ್ಲ. ಜಂಕ್ಷನ್‌ ಕೂಡ ಸರಿಯಿಲ್ಲ. ಬೆಳಕಿನ ವ್ಯವಸ್ಥೆಯಿಲ್ಲ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವವರ ಗಮನಕ್ಕೆ ತಂದರೂ ಯಾವುದೇ ಪರಿಹಾರ ಆಗಿಲ್ಲ. ಇದರ ಪರಿಣಾಮವೇ ಈ ರೀತಿಯ ಅಪಘಾತಗಳು ಆಗಾಗ ಆಗುತ್ತಲೇ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next