Advertisement

ಏರ್‌ಪೋರ್ಟ್‌ನಿಂದ ರೈಲ್ವೆ-ಬಸ್‌ ನಿಲ್ದಾಣಕ್ಕೆ ಸಾರಿಗೆ ವ್ಯವಸ್ಥೆ ಆರಂಭ

05:15 PM Oct 21, 2018 | Team Udayavani |

ಹುಬ್ಬಳ್ಳಿ: ನಗರಕ್ಕೆ ವಿಮಾನ ಮೂಲಕ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ವಿಮಾನ ನಿಲ್ದಾಣದಿಂದ ಹಳೇ ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಸಿಬಿಟಿ ವರೆಗೆ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರ ಬೇಡಿಕೆ ಅನುಸರಿಸಿ ಅವಳಿ ನಗರದ ಇತರೆ ಭಾಗಗಳಿಗೂ ಈ ಸೇವೆ ಆರಂಭಿಸಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. 

Advertisement

ಶನಿವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಾಕರಸಾ ಸಂಸ್ಥೆಯ ನಗರ ಸಾರಿಗೆ ಬಸ್‌ಗಳಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. ಸಾಮಾನ್ಯ ಜನರಿಗೂ ಇಂದು ವಿಮಾನಯಾನ ಸೇವೆ ಲಭ್ಯವಾಗಿದೆ. ಆದರೆ ವಿಮಾನದಲ್ಲಿ ಪ್ರಯಾಣಿಸುವರೆಲ್ಲರಿಗೂ ದುಬಾರಿಯಾದ ಕಾರುಗಳ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ದರದಲ್ಲಿ ವೋಲ್ವೊ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ಮಿನಿ ಬಸ್‌ಗಳ ಸೇವೆಯನ್ನೂ ಪ್ರಾರಂಭಿಸಲಾಗುವುದು. 17 ವೇಳಾಪಟ್ಟಿಗಳಲ್ಲಿ ನಗರ ಸಾರಿಗೆ ಬಸ್‌ಗಳು ವಿಮಾನ ನಿಲ್ದಾಣದಿಂದ ನಗರದ ಪ್ರಮುಖ ಸಂಪರ್ಕ ಸ್ಥಳಗಳಿಗೆ ಸಂಚಾರ ಮಾಡಲಿವೆ. ಪ್ರಯಾಣಿಕರ ಅವಶ್ಯಕತೆ ಪರಿಗಣಿಸಿ ಮಿನಿ ಬಸ್‌ಗಳ ಸಂಚಾರ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಅವಳಿ ನಗರದ ವಿವಿಧ ಪ್ರದೇಶಗಳಿಗೂ ವಿಸ್ತರಿಸುವ ಚಿಂತನೆ ನಡೆದಿದೆ ಎಂದರು.

ಮಹದಾಯಿ ನೀರಿನ ಬಳಕೆಯ ಬಗ್ಗೆ ಸೂಕ್ತ ನಿರ್ಧಾರವನ್ನು ಸರಕಾರದ ಮಟ್ಟದಲ್ಲಿ ಕೈಗೊಳ್ಳಲಾಗುವುದು. ಈ ಕುರಿತು ಚರ್ಚೆ ನಡೆದಿದ್ದು, ಶೀಘ್ರವೇ ಕೆಲಸ ಆರಂಭಿಸಲಾಗುವುದು. ನಗರದಲ್ಲಿ ಸ್ಥಾಪನೆಯಾದ ನೂತನ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಸ್ಥಳಾಂತರದ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕಾರ್ಯಗತಗೊಳಿಸಲಾಗುವುದು. ಬಿಆರ್‌ಟಿಎಸ್‌ ಬಸ್‌ ಪ್ರಾಯೋಗಿಕವಾಗಿ ಸಂಚರಿಸುತ್ತಿದೆ. ಈ ವೇಳೆ ಕಂಡುಬಂದ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದೀಪಾ ಚೋಳನ್‌, ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕಿ ಅಹಲ್ಯಾ ಕಾಕೋಡಿಕರ, ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಮೋಹನ ಹಿರೇಮನಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ರಾಜಾ ದೇಸಾಯಿ ಮೊದಲಾದವರಿದ್ದರು.

ಬಸ್‌ ದರ ನಿಗದಿ
ವೋಲ್ವೊ ಮಲ್ಟಿ ಎಕ್ಸೆಲ್‌ ಬಸ್‌ಗೆ ವಿಮಾನ ನಿಲ್ದಾಣದಿಂದ ಹೊಸ ಬಸ್‌ನಿಲ್ದಾಣಕ್ಕೆ 20, ಹಳೆ ಬಸ್‌ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ 25 ರೂ. ದರ ನಿಗದಿ ಪಡಿಸಲಾಗಿದೆ. ಮಿನಿ ಬಸ್‌ಗಳಿಗೆ ಹೊಸ ಬಸ್‌ನಿಲ್ದಾಣಕ್ಕೆ 12, ಹಳೆ ಬಸ್‌ನಿಲ್ದಾಣಕ್ಕೆ 13 ರೂ. ಹಾಗೂ ರೈಲ್ವೆ ನಿಲ್ದಾಣ-ಸಿಬಿಟಿಗೆ 15 ರೂ. ದರ ನಿಗದಿ ಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next