Advertisement

ಸಾರಿಗೆ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಲಿ​​​​​​​

06:00 AM Dec 02, 2018 | Team Udayavani |

ಬೆಂಗಳೂರು: ಹತ್ತು ಶಾಲಾ ಮಕ್ಕಳು ಸೇರಿ ಮೂವತ್ತು ಜನರನ್ನು ಬಲಿ ತೆಗೆದುಕೊಂಡ “ಮಂಡ್ಯ ಬಸ್‌ ದುರಂತ’ವು ನಮ್ಮ ಸಾರಿಗೆ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. 

Advertisement

ಅಷ್ಟೇ ಅಲ್ಲ, ಇಂತಹ ಘಟನೆ ಮರುಕಳಿಸದಿರಲು ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ನೀತಿಯನ್ನು ರೂಪಿಸುವ ಅಗತ್ಯತೆಯನ್ನು ಒತ್ತಿ ಹೇಳಿದೆ.

ಒಂದೆಡೆ ಗ್ರಾಮೀಣ ಜನರನ್ನು ಅಷ್ಟಾಗಿ ಆಕರ್ಷಿಸದ ಸರ್ಕಾರಿ ಬಸ್‌ಗಳು, ಮತ್ತೂಂದೆಡೆ ಆಗಾಗ್ಗೆ ಅಮಾಯಕರ ಬಲಿ ಪಡೆಯುತ್ತಲೇ ಇರುವ ಖಾಸಗಿ ಬಸ್‌ಗಳ ಹಾವಳಿ ಹಾಗೂ ಇದೆಲ್ಲದರ ನಡುವೆಯೂ ನಿರಾತಂಕವಾಗಿರುವ ಸಾರಿಗೆ ಇಲಾಖೆ. ಇದನ್ನು ಸರಿಪಡಿಸಲು ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯ ಅವಶ್ಯಕತೆಯಿದೆ. ಇದಕ್ಕಾಗಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಸಂಬಂಧ ಸಾರಿಗೆ ತಜ್ಞರು ನೀಡಿದ ಕೆಲವು ಸಲಹೆಗಳು ಹೀಗಿವೆ.

ಏನು ಮಾಡಬಹುದು?
ಸಾರಿಗೆ ನಿಯಮಗಳ ಉಲ್ಲಂಘನೆ ವಿರುದ್ಧದ ಕಾರ್ಯಾಚರಣೆ ಬರೀ ಹೆಲ್ಮೆಟ್‌ ಇಲ್ಲದ ಅಥವಾ ಪರವಾನಗಿರಹಿತ ಚಾಲನೆಗೆ ಸೀಮಿತವಾಗಬಾರದು. ಫಿಟ್‌ನೆಸ್‌ ಇಲ್ಲದೆ ಓಡಾಡುವ ಬಸ್‌ಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲೂ ಈ ಕಾರ್ಯಾಚರಣೆ ವಿಸ್ತರಣೆ ಆಗಬೇಕು. ಆಗ ಭಯ ಬರುತ್ತದೆ. ಇದಕ್ಕಾಗಿ ಪೊಲೀಸ್‌ ಮತ್ತು ಸಾರಿಗೆ ಇಲಾಖೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಿಬ್ಬಂದಿ ಕೊರತೆ ನೆಪವಾಗದೆ, ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು.

ಖಾಸಗಿ ಬಸ್‌ಗಳ ಅರ್ಹತಾ ಪ್ರಮಾಣಪತ್ರ (ಎಫ್ಸಿ) ವಿತರಣೆ ಅಥವಾ ನವೀಕರಣ ವ್ಯವಸ್ಥೆ ಮತ್ತಷ್ಟು ಕಟ್ಟುನಿಟ್ಟಾಗಬೇಕು. ಒಬ್ಬ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್‌ ದಿನಕ್ಕೆ 30-40 ವಾಹನಗಳಿಗೆ ಎಫ್ಸಿ ನೀಡುವ ಒತ್ತಡ ಇದೆ. ಹೀಗಿರುವಾಗ, ಗುಣಮಟ್ಟದ ತಪಾಸಣೆ ನಿರೀಕ್ಷಿಸಲು ಹೇಗೆ ಸಾಧ್ಯ? ಆದ್ದರಿಂದ ಈ ಹೊರೆ ಕಡಿಮೆ ಆಗಬೇಕು.

Advertisement

ಖಾಸಗಿ ವಾಹನಗಳ ಚಾಲಕರಿಗೆ ಕೌಶಲ್ಯಾಧಾರಿತ ತರಬೇತಿಯ ವ್ಯವಸ್ಥೆ ಆಗಬೇಕು. ಖಾಸಗಿ ವಾಹನ ಮಾಲೀಕರು ಚಾಲಕರನ್ನು ನೇಮಕ ಮಾಡಿಕೊಳ್ಳುವಾಗ ಇದನ್ನು ಕಡ್ಡಾಯಗೊಳಿಸಬೇಕು.

ಮಂಡ್ಯ ದುರಂತದಂತಹ ಅಪಘಾತಗಳು ಸಂಭವಿಸಿದಾಗ, ಆತನ ಪರವಾನಗಿ ಆಟೋಮ್ಯಾಟಿಕ್‌ ಆಗಿ ರದ್ದಾಗಬೇಕು. ಮತ್ತೆ ಆ ವ್ಯಕ್ತಿಗೆ ಪರವಾನಗಿ ಹಿಂತಿರುಗಿಸುವಾಗ ಚಾಲನಾ ಪರೀಕ್ಷೆಗೊಳಪಡಿಸಬೇಕು.

ಪರ್ಮಿಟ್‌ಗಳನ್ನು ಪಡೆದಲ್ಲಿಯೇ ಖಾಸಗಿ ಬಸ್‌ಗಳು ಸಂಚರಿಸಬೇಕು. ಈ ನಿಟ್ಟಿನಲ್ಲಿ ನಿಯಮಿತ ಕಾರ್ಯಾಚರಣೆ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಆಗಬೇಕು.

ಕೆಎಸ್‌ಆರ್‌ಟಿಸಿ ಬಸ್‌ಗಳು ಹಳ್ಳಿಗಳಲ್ಲಿ ಸೇವೆ ನೀಡುತ್ತವೆ. ಆದರೆ, ನಷ್ಟದಲ್ಲಿರುವುದರಿಂದ ಆ ಸೇವೆಗಳು ಅಪರೂಪ. ಆದ್ದರಿಂದ ಸರ್ಕಾರ ಕಾರ್ಯಾಚರಣೆ ವೆಚ್ಚವನ್ನು ತಕ್ಕಮಟ್ಟಿಗೆ ಭರಿಸುವಂತಾಗಬೇಕು. ಬರೀ ಬಸ್‌ಗಳನ್ನು ನೀಡಿದರೆ ಸಾಲದು.

ರಾಷ್ಟ್ರೀಕರಣಗೊಳ್ಳದ ಇನ್ನೂ ನಾಲ್ಕು ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿ ಬಸ್‌ ಸಂಪರ್ಕವೇ ಇಲ್ಲ. ಅಲ್ಲಿ ಸಾರಿಗೆ ಸಂಪರ್ಕಕ್ಕೆ ಆದ್ಯತೆ ನೀಡಬೇಕು.

ಕಡಿವಾಣ ಬಿದ್ದಿಲ್ಲ
ಒಪ್ಪಂದ ಪರವಾನಗಿ ಪಡೆದು ನಗರದಲ್ಲಿ ಮಜಲು ವಾಹನಗಳ ಪರ್ಮಿಟ್‌ ಮಾದರಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ವಾಹನಗಳ ವಿರುದ್ಧ ನೂರಾರು ಬಾರಿ ಸಾರಿಗೆ ಇಲಾಖೆಗೆ ಕೆಎಸ್‌ಆರ್‌ಟಿಸಿ ದೂರು ಸಲ್ಲಿಸಿದೆ. ಅಷ್ಟೇ ಅಲ್ಲ, ಲೋಕಾಯುಕ್ತದವರೆಗೂ ಈ ಸಂಬಂಧದ ದೂರು ಹೋಗಿದೆ. ಆದರೂ, ಕಡಿವಾಣ ಬಿದ್ದಿಲ್ಲ. ನಿಯಮ ಉಲ್ಲಂ ಸಿ ಓಡಾಡುತ್ತಿರುವ ಖಾಸಗಿ ವಾಹನಗಳ ವಿಡಿಯೋ ತುಣುಕುಗಳ ಸಹಿತ ಸಾರಿಗೆ ಇಲಾಖೆಗೆ ನಿಗಮವು ದೂರು ಸಲ್ಲಿಸಿದೆ. ಲೋಕಾಯುಕ್ತದಲ್ಲಿ ಸಲ್ಲಿಸಿದ ದೂರಿನ ಬಗ್ಗೆ ವಿಚಾರಣೆ ಇನ್ನೂ ನಡೆಯುತ್ತಿದೆ. ಮತ್ತೂಂದೆಡೆ ಖಾಸಗಿ ವಾಹನಗಳ ಕಾರ್ಯಾಚರಣೆ ರಾಜಾರೋಷವಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next