ಕುದೂರು: ಹೋಬಳಿಯ ಮಲ್ಲಿಗುಂಟೆ, ಕನ್ನಸಂದ್ರ ಮಾರ್ಗವಾಗಿ ಕುತ್ತಿನಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದ್ದು, ನಿತ್ಯ ಸಂಚಾರ ನರಕಯಾತನೆ ಆನುಭವಿಸುವಂತಾಗಿದೆ.
ಈ ರಸ್ತೆಗೆ ಸುಮಾರು 20 ವರ್ಷಗಳ ಹಿಂದೆಯೇ ಡಾಂಬರೀಕರಣ ಮಾಡಲಾಗಿದ್ದು, ಇಂದಿಗೂ ಅದೇ ಡಾಂಬರೀಕರಣವನ್ನು ಆಶ್ರಯಿಸಬೇಕಾದ ಅನಿವಾರ್ಯದಿಂದ ಜನತೆ ಬೇಸತ್ತು ಹೋಗಿದ್ದಾರೆ. ರಸ್ತೆಯಲ್ಲಿ ಮಾರುದ್ದ ಗುಂಡಿಗಳಿದ್ದು, ಇದರಿಂದ ಪ್ರಯಾಣಿಕರಿಗೆ ನರಕವಾಗಿದೆ. ನಿತ್ಯ ವ್ಯಾಪಾರ, ಶಿಕ್ಷಣ, ಆಸ್ಪತ್ರೆ ಹಾಗೂ ಮಾರುಕಟ್ಟೆ ಸಂಚಾರಿಸುವ ಸಾರ್ವಜನಿಕರ ಪರಿಸ್ಥಿತಿಯನ್ನು ಹೇಳ ತೀರದಾಗಿದೆ.
ಗಮನಕ್ಕೆ ಸೆಳೆದರೂ ಪ್ರಯೋಜನವಿಲ್ಲ: ರಸ್ತೆಯ ಹಾಳಾಗಿರುವುದನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ರಸ್ತೆ ಸರಿಪಡಿಸುವ ಭರವಸೆ ನೀಡುತ್ತಾರೆಯೇ ಹೊರತು ರಸ್ತೆಗೆ ತ್ಯಾಪೆ ಹಾಕುವ ಇಲ್ಲವೇ ಮರು ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಈ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳ ಜನರ ಪಾಡು ಹೇಳತೀರದಾಗಿದೆ.
ಮಾರುಕಟ್ಟೆ ತಲುಪದ ಬೆಳೆ: ರಸ್ತೆ ಹಾಳಾಗಿರುವುದರಿಂದ ಈ ಭಾಗದ ರೈತರು, ಬೆಳೆಯುವ ಬೆಳೆಯನ್ನು ದೂರದ ಮಾರುಕಟ್ಟೆಯನ್ನು ತಲುಪಿಸಲು ಎಣಗಾಡಬೇಕಾದ ದುಸ್ಥಿತಿ ಎದುರಾಗಿದೆ. ಒಂದು ವೇಳೆ ಸಾಗಿಸಲು ಮುಂದಾದರು ಗುಂಡಿಮಯ ರಸ್ತೆಯಲ್ಲಿ ಸಾರಿಗೆಗೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ಇದರಿಂದ ರೈತರು ಇದ್ದ ಸ್ಥಳದಲ್ಲಿಯೇ ಸಿಕ್ಕಷ್ಟು ಬೆಲೆಗೆ ನೀಡಿ ನೆಮ್ಮದಿಯ ನೆಟ್ಟುಸಿರು ಬಿಡುವಂತಹ ವಾತಾವರಣ ನಿರ್ಮಾಣವಾಗಿದೆ. ಅದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಎಷ್ಟೋ ಬೆಳೆ ಸಕಾಲಕ್ಕೆ ಮಾರುಕಟ್ಟೆಯನ್ನು ತಲುಪದೇ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ಅನುಭವಿಸುವಂತಾಗುತ್ತಿದೆ. ಆದ್ದರಿಂದ ರಸ್ತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂಬುದು ಈ ಭಾಗದ ರೈತರು ಅಗ್ರಹಿಸಿದ್ದಾರೆ.
ಸಂಚಾರ ಸಂಕಷ್ಟ: ರಸ್ತೆಯಲ್ಲಿಯೇ ಗುಂಡಿಯಾಗಿ ರುವುದರಿಂದ ಅನಿವಾರ್ಯ ಸಂದರ್ಭಗಳಲ್ಲೂ ಸಂಚಾರಿಸಲಾಗದೇ ವ್ಯಥೆ ಅನುಭವಿಸಬೇಕಾಗುತ್ತದೆ. ಇನ್ನೂ ರಾತ್ರಿ ವೇಳೆ ವಾಹನದಿಂದ ಬಿದ್ದು, ಗಾಯಗೊಂಡಿರುವ ಘಟನೆ ಸಾಕಷ್ಟು ಇದೆ. ಇನ್ನೂ ತುರ್ತು ವೇಳೆಯಲ್ಲಿ ಯಥಾಸ್ಥಿತಿ ಮುಂದುವರಿ ಯುತ್ತಿದೆ. ರಸ್ತೆಯನ್ನು ದುರಸ್ತಿಪಡಿಸುವಂತೆ ಜನಪತ್ರಿನಿಧಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ. ಹೀಗೆ ಮುಂದುವರಿದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಮಲ್ಲಿಗುಂಟೆ, ಕನ್ನಸಂದ್ರ ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಿದ್ಧಗಂಗಾಶ್ರೀ ಪುಣ್ಯ ಸ್ಮರಣೆಯಿಂದ ರಸ್ತೆಗೆ ಭೂಮಿ ಪೂಜೆ ಮಾಡಲಾಗಿಲ್ಲ. ಶೀಘ್ರದಲ್ಲಿಯೇ ಶಾಸಕ ಮಂಜುನಾಥ್ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು.
●ಚಂದ್ರಕಲಾ, ಉಪಾಧ್ಯಕ್ಷೆ, ಮಾದಿಗೊಂಡನಹಳ್ಳಿ ಗ್ರಾಪಂ
ನಮ್ಮ ರಸ್ತೆಯಲ್ಲಿ ಸಂಚಾರಕ್ಕೆ ಬಹಳ ಕಷ್ಟಪಡಬೇಕು. ನಾವು ಬೆಳೆದ ಬೆಳೆಗಳನ್ನು ಈ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ
ಕೊಂಡೊಯ್ಯಲು ಎರಡರಷ್ಟು ಹಣ ನಿಡಬೇಕು. ರಸ್ತೆಯ ಹಾಳಾಗಿರುವುದರಿಂದ ಎಲ್ಲಾ ಅಭಿವೃದ್ಧಿ ಕುಂಠಿತವಾಗಿದೆ. ಅದ್ದರಿಂದ ಶೀಘ್ರದಲ್ಲಿಯೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
●ಚಿದಾನಂದ ಮಲ್ಲಿಗುಂಟೆ, ರೈತ
ರಸ್ತೆ ದುರಸ್ತಿಪಡಿಸಲು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬರೀ ಭರವಸೆ ನೀಡುತ್ತಾರೆಯೇ ಹೊರತು ರಸ್ತೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿಲ್ಲ.
●ರಂಗಸ್ವಾಮಯ್ಯ, ಗ್ರಾಮಸ್ಥ
● ಕೆ.ಎಸ್.ಮಂಜುನಾಥ್ ಕುದೂರು