ಬೀದರ್: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಅಗ್ರಹಿಸಿ ಶುಕ್ರವಾರ ಕರೆ ನೀಡಿರುವ ಬಸ್ ಬಂದ್ ಮುಷ್ಕರಕ್ಕೆ ಗಡಿ ಜಿಲ್ಲೆ ಬೀದರ್ ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರ ಸೇರಿದಂತೆ ಜಿಲ್ಲೆಯಾದ್ಯಂದತ ಬೆಳಿಗ್ಗೆ ಬಸ್ ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಸಾರಿಗೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ನಂತರ ಎನ್ ಕೆಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನೌಕರರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಇದಕ್ಕೆ ಮಣಿಯದಿದ್ದಾಗ ಪರವಾನಿಗೆ ಪಡೆಯದೇ ಮುಷ್ಕರ ನಡೆಸಲಾಗುತ್ತಿದೆ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಮೆಮೊ ಜಾರಿಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ರೈತರನ್ನು ಮುಂದಿಟ್ಟು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ: ಅಶೋಕ್ ಆಕ್ರೋಶ
ಹಾಗಾಗಿ ಕೆಲ ಚಾಲಕರು ಕರ್ತವ್ಯಕ್ಕೆ ಹಾಜರಾಗಿ ಬಸ್ ಗಳನ್ನು ರಸ್ತೆಗಿಳಿಸಿದ್ದಾರೆ. ಬಹುತೇಕರು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಪ್ರತಿ ನಿತ್ಯ 450 ಬಸ್ ಗಳು ಸಂಚರಿಸುತ್ತಿದ್ದು, ಮುಷ್ಕರ ಹಿನ್ನಲೆ ಶೇ. 30ರಷ್ಟು ಬಸ್ ಗಳ ಕಾರ್ಯಾಚರಣೆ ಶುರುವಾಗಿದೆ.
ಬಸ್ ಗಳ ಸಂಚಾರ ಬಂದ್ ಬಗ್ಗೆ ಮಾಹಿತಿ ಇಲ್ಲದೆ ನಿಲ್ದಾಣಗಳತ್ತ ಆಗಮಿಸಿದ ಪ್ರಯಾಣಿಕರು ಕೊಂಚ ಸಮಸ್ಯೆ ಎದುರಿಸುವಂತಾಗಿದೆ.