ದಾವಣಗೆರೆ: ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಸೋಮವಾರ ದಾವಣಗೆರೆ ವಿಭಾಗ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಸರ್ಕಾರಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವ ಚಾಲಕರು, ನಿರ್ವಾಹಕರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸುತ್ತಲೇ ಇಲ್ಲ. ಕಚೇರಿಯಲ್ಲಿನ ಕೆಲಸ ಮಾಡುವರು ನೌಕರರು ಎಂದು ಪರಿಗಣಿಸಿದೆ. ಆದರೆ, ಹಗಲು-ರಾತ್ರಿ ಎನ್ನದೆ ಕೆಲಸ ಮಾಡುವರನ್ನ ಸರ್ಕಾರಿ ನೌಕರರು ಎಂದು ಪರಿಗಣಿಸದೇ ಇರುವುದು ದುರಾದೃಷ್ಟಕರ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಖರೀದಿ, ದರ ನಿಗದಿ, ನೌಕರರ ವೇತನ, ವರ್ಗಾವಣೆ, ಪ್ರಯಾಣಿಕರಿಗೆ ಪಾಸ್ ಇತರೆ ಸೌಲಭ್ಯ ಒದಗಿಸುವ ವಿಷಯದಲ್ಲಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಆದರೆ, ಬಸ್ ಸಂಚಾರದಲ್ಲಿ ಗಮನಾರ್ಹ ಪಾತ್ರ ವಹಿಸುವರನ್ನೇ ನೌಕರರು ಎಂದೇ ಪರಿಗಣಿಸದೇ ಇರುವುದು ಖಂಡನೀಯ. ಈ ಬಾರಿಯ ಬಜೆಟ್‌ನಲ್ಲಿ ನೌಕರರು ಎಂಬುದಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಕೆ, ಹೋರಾಟ ನಡೆಸುತ್ತಿದ್ದರೂ ವೇತನ ಹೆಚ್ಚಳ ಮಾಡುತ್ತಿಲ್ಲ. ಸರ್ಕಾರಿ ನೌಕರರಗಿಂತಲೂ ಶೇ.50 ರಷ್ಟು ಕಡಿಮೆ ವೇತನ ಪಡೆಯಲಾಗುತ್ತಿದೆ. ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಕೂಡಲೇ ವೇತನ ಹೆಚ್ಚಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಸದುದ್ದೇಶದಿಂದ ವಾರದ ರಜೆ, ಕರ್ತವ್ಯ ಮುಗಿಸಿದವರು ಮತ್ತು ಕುಟುಂಬ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದಾರೆ. ಸರ್ಕಾರ ಕೂಡಲೇ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆರ್. ಚಂದ್ರಶೇಖರ್, ಕೆ. ತಿಪ್ಪೇಸ್ವಾಮಿ, ಎನ್. ಸತೀಶ್, ಓಂಕಾರ್, ಮಂಜುನಾಥ್ ಸೂಡಂಬಿ, ಕೊಟ್ರೇಶ್ ಪುಂಡಿ, ಮಲ್ಲಿಕಾರ್ಜುನ್,ಪ್ರಶಾಂತ್, ಮಂಜುನಾಥ್, ನಾಗೇಂದ್ರ ಇತರರು ಇದ್ದರು.