ಹುಬ್ಬಳ್ಳಿ: ಗುಜರಿ ವಸ್ತುಗಳನ್ನು ಬಳಸಿಕೊಂಡು ಇಲ್ಲಿನ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ಕಾರ್ಯಾಗಾರದ ಸಿಬ್ಬಂದಿ ಸ್ವಚ್ಛತಾ ಪರಿಕರ, ದುರಸ್ತಿ ಕಾರ್ಯಕ್ಕೆ ಬೇಕಾದ ಅಗತ್ಯ ಸಾಮಗ್ರಿ ಸಿದ್ಧಪಡಿಸಿದ್ದು, ಲಾಕ್ ಡೌನ್ ಅವಧಿಯಲ್ಲಿ ಬಸ್‌ಗಳ ದುರಸ್ತಿ ಕಡಿಮೆಯಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ತಯಾರಿಸಿ ವಿಭಾಗಕ್ಕೆ ಲಕ್ಷಾಂತರ ರೂಪಾಯಿ ಉಳಿತಾಯ ಮಾಡಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕಸದ ತೊಟ್ಟಿಯಾಗಿದ್ದ 2ನೇ ಗ್ರಾಮೀಣ ಘಟಕವನ್ನು ಸುಂದರ ಹಾಗೂ ಪರಿಸರ ಸ್ನೇಹಿ ಘಟಕವನ್ನಾಗಿ ಮಾಡುವ ಮೂಲಕ ಇತರೆ ಘಟಕಗಳಿಗೆ ಪ್ರೇರಣೆಯಾಗಿದ್ದರು. ಗುಜರಿ ಸಾಮಗ್ರಿ ಬಳಸಿ ಹಾಗೂ ಕೆಲ ಸಿಬ್ಬಂದಿ ಸ್ವಂತ ಖರ್ಚಿನಿಂದ ಸಂಸ್ಥೆಗೆ ಯಾವುದೇ ಆರ್ಥಿಕ ಹೊರೆ ಹಾಕದೆ ಇಡೀ ಘಟಕ ಹಸರೀಕರಣಕ್ಕೆ ಮುನ್ನಡಿ ಬರೆದಿದ್ದರು. ಇದೀಗ ಅದೇ ಮಾದರಿಯಲ್ಲಿ ಗ್ರಾಮೀಣ ವಿಭಾಗ ವ್ಯಾಪ್ತಿಯ ವಿಭಾಗೀಯ ಕಾರ್ಯಾಗಾರ ಸಿಬ್ಬಂದಿ ತಾವೇನು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತೆ ಲಾಕ್‌ಡೌನ್ ಅವಧಿ ಹಾಗೂ ನಂತರದಲ್ಲಿ ಬಸ್ ಗಳ ದುರಸ್ತಿ ಕಾರ್ಯ ಕಡಿಮೆ ಇರುವ ಕಾರಣಕ್ಕೆ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ವಿವಿಧ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ.
ಸ್ವಚ್ಛತಾ ಪರಿಕಗಳ ಸಿದ್ಧತೆ: ಬಸ್ ನಿಲ್ದಾಣ, ಘಟಕಗಳು, ವಿಭಾಗೀಯ ಕಚೇರಿ ಹಾಗೂ ಘಟಕಗಳಿಗೆ ಬೇಕಾಗುವ ಕಸದತೊಟ್ಟಿ, ಕಸ ಸಾಗಿಸುವ ಟ್ರಾಲಿಗಳನ್ನು ಬೇಡಿಕೆಗೆ ಅನುಗುಣವಾಗಿ ತಯಾರಿಸಿದ್ದಾರೆ. ಸಂಸ್ಥೆ ಖರೀದಿಸುವ ಆಯಿಲ್ ಬ್ಯಾರಲ್‌ಗಳನ್ನು ಕತ್ತರಿಸಿ ಕಸದ ಡಬ್ಬಿ ತಯಾರಿಸಿದ್ದು ಹಾಕಿದ ಕಸ ಕೈ ಹಾಕಿ ಬಳೆಯುವ ಬದಲು ಅದನ್ನು ಬಾಗಿಸಿ ನೇರವಾಗಿ ಕಸ ಸಾಗಿಸುವ ಟ್ರಾಲಿಗೆ ಹಾಕಿಕೊಳ್ಳುವಂತೆ ತಿರುಗಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಕಸ ಸಾಗಿಸುವ ಟ್ರಾಲಿಗಳನ್ನು ಬಸ್ ಬಾಡಿ ನಿರ್ಮಾಣಕ್ಕೆ ಬಳಸಿ ಉಳಿದ ನಿರುಪಯುಕ್ತ ವಸ್ತುಗಳಿಂದ ಗಟ್ಟಿಮುಟ್ಟಾಗಿ ಸಿದ್ಧಪಡಿಸಿದ್ದಾರೆ. ಟೇಬಲ್, ಕುರ್ಚಿಗಳನ್ನು ಕೂಡ ತಯಾರಿಸಿದ್ದಾರೆ.
ದುರಸ್ತಿ ವಸ್ತುಗಳು: ಸ್ವಚ್ಛತಾ ಸಾಮಗ್ರಿಗಳೊಂದಿಗೆ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರಕ್ಕೆ ಅಗತ್ಯವಾದ ಕೆಲ ಸಾಮಗ್ರಿಗಳನ್ನು ಕೂಡ ಗುಜರಿ ವಸ್ತುಗಳಿಂದ ಅವಕ್ಕೆ ರೂಪ ನೀಡಿದ್ದಾರೆ. ಬಸ್ ದುರಸ್ತಿಗೆ ಅಗತ್ಯವಾದ ಗೋಡಾ, ಅತೀ ಸರಳವಾಗಿ ಟಾಯರ್‌ಎತ್ತುವ ಉಪಕರಣ ಸಿದ್ಧವಾಗಿವೆ. ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಪೆಡಲ್ ಆಧಾರಿತ ಸ್ಯಾನಿಟೈಸರ್ ಯಂತ್ರ ತಯಾರಿಸಿ ಎಲ್ಲಾ ಘಟಕ, ವಿಭಾಗೀಯ ಕಚೇರಿಗಳಲ್ಲಿ ಬಳಸಲಾಗುತ್ತಿದೆ. ಇಲ್ಲಿನ ಮೆಕ್ಯಾನಿಕ್ ಗಳು ತಮ್ಮ ಅನುಭವ ಬಳಸಿಕೊಂಡು ಮತ್ತಷ್ಟು ಸಾಮಗ್ರಿ ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಮಾಸ್ಕ್ ಖರೀದಿಸುತ್ತಿಲ್ಲ: ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮಾಸ್ಕ್ ಗಳನ್ನು ಕೂಡ ಇಲ್ಲಿನ ಸಿಬ್ಬಂದಿಯೇ ಹೊಲಿಯುತ್ತಿದ್ದಾರೆ. ಆರಂಭದಲ್ಲಿ 7 ಸಾವಿರ ಮಾಸ್ಕ್ ಗಳನ್ನು ಖರೀದಿಸಿದ್ದು ಬಿಟ್ಟರೆ ಉಳಿದಂತೆ ಇಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು ಮೂರು ಸಾವಿರ ಮರು ಬಳಕೆಯ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗಿದೆ.
ಲಾಕ್‌ಡೌನ್ ಅವಧಿಯನ್ನು ಕೆಲ ಸಿಬ್ಬಂದಿ ಸದ್ಬಳಕೆ ಮಾಡಿಕೊಂಡಿದ್ದಾರೆ. ತಮ್ಮಲ್ಲಿರುವ ಪ್ರತಿಭೆ ಬಳಸಿಕೊಂಡು ನಿರುಪಯುಕ್ತ ವಸ್ತುಗಳಿಂದ ಬಹು ಉಪಯೋಗಿ ವಸ್ತುಗಳನ್ನು ಸಿದ್ಧಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅಗತ್ಯ ವಸ್ತುಗಳನ್ನು ತಯಾರಿಸಿರುವುದರಿಂದ ಸಾಮಗ್ರಿ ಖರೀದಿಯಿಂದ ವಿಭಾಗಕ್ಕೆ ಲಕ್ಷಾಂತರ ರೂಪಾಯಿ ಉಳಿತಾಯವಾಗಿದೆ. –
ಎಚ್. ರಾಮನಗೌಡರ, ವಿಭಾಗೀಯ ನಿಯಂತ್ರಣಾಧಿಕಾರಿ, ಗ್ರಾಮಾಂತರ ಸಾರಿಗೆ ವಿಭಾಗ
-ಹೇಮರಡ್ಡಿ ಸೈದಾಪುರ