ರಾಯಚೂರು: ನಗರದಿಂದ 18 ಕಿ.ಮೀ. ದೂರದಲ್ಲಿರುವ ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಇಂದಿಗೂ ಸಾರಿಗೆ ಬಸ್ ಸಮಸ್ಯೆ ನೀಗಿಲ್ಲ. ಅದರಲ್ಲೂ ವಿದ್ಯಾರ್ಥಿನಿಯರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುವಂಥ ಪರಿಸ್ಥಿತಿ ಇದೆ.
ವಿಶ್ವವಿದ್ಯಾಲಯ ಶುರುವಾಗಿ 2ನೇ ವರ್ಷ ಮುಗಿಯುತ್ತ ಬಂದಿದೆ. ಇನ್ನೇನು ಮೂರನೇ ವರ್ಷದ ಪ್ರವೇಶ ಪ್ರಕ್ರಿಯೆ ಶುರುವಾಗಲಿದ್ದು, ವಿದ್ಯಾರ್ಥಿಗಳ ಸಂಖ್ಯೆ 2 ಸಾವಿರ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇಷ್ಟೊಂದು ವಿದ್ಯಾರ್ಥಿಗಳಿದ್ದರೂ ವಿವಿಗೆ ಸೀಮಿತ ಬಸ್‌ಗಳ ಓಡಾಟವಿರುವ ಕಾರಣ ವಿದ್ಯಾರ್ಥಿಗಳು ಬಹುಕಾಲ ಕ್ಯಾಂಪಸ್ ನಿಲ್ದಾಣದಲ್ಲೇ ಕಳೆಯುವಂತಾಗಿದೆ.
ರಾಯಚೂರು, ಯಾದಗಿರಿ ಜಿಲ್ಲೆಯನ್ನು ಒಳಗೊಂಡು ವಿವಿ ಸ್ಥಾಪಿಸಿದ್ದು, ಎರಡು ಜಿಲ್ಲೆಗಳ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ವಿವಿಯಲ್ಲಿ ವಸತಿ ಸೌಲಭ್ಯ ಸರಿಯಾಗಿ ಇಲ್ಲದಿರುವ ಕಾರಣ ಸಾಕಷ್ಟು ವಿದ್ಯಾರ್ಥಿಗಳು ನಗರದಿಂದ ಓಡಾಡುತ್ತಾರೆ. ಇನ್ನೂ ಕೆಲವರು ಬೇರೆ ಊರುಗಳಿಂದ ರಾಯಚೂರಿಗೆ ಬಂದು ಅಲ್ಲಿಂದ ವಿವಿಗೆ ಬರಬೇಕಿದೆ. ಈ ರೀತಿ ಬರುವವರಿಗೆ ಸಕಾಲಕ್ಕೆ ಬಸ್ ಸಿಕ್ಕರೆ ಅನುಕೂಲವಾಗಲಿದೆ.
ವೇಗದೂತ ಬಸ್ ನಿಲ್ಲುತ್ತಿಲ್ಲ: ರಾಯಚೂರು- ಮಂತ್ರಾಲಯ ಮಾರ್ಗದಲ್ಲಿ ವಿವಿ ಕ್ಯಾಂಪಸ್ ಬರಲಿದ್ದು, ಕರ್ನಾಟಕಾಂಧ್ರಕ್ಕೆ ಸಂಪರ್ಕ ಕಲ್ಪಿಸುವ ಹತ್ತಾರು ಬಸ್ ಗಳು ನಿರಂತರ ಸಂಚರಿಸುತ್ತವೆ. ಆಂಧ್ರ ಬಸ್‌ಗಳು ಇಲ್ಲಿ ನಿಲುಗಡೆ ಮಾಡುವುದಿಲ್ಲ. ಆದರೆ, ಕರ್ನಾಟಕ ಸಾರಿಗೆ ಬಸ್‌ಗಳನ್ನು ಕೂಡ ಇಲ್ಲಿ ನಿಲ್ಲಿಸುವುದಿಲ್ಲ ಎಂದು ನಿರ್ವಾಹಕರು ಖಡಾಖಂಡಿತವಾಗಿ ಹೇಳುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕನಿಷ್ಟ ಪಕ್ಷ ವೇಗದೂತ ಬಸ್‌ಗಳು ನಿಲುಗಡೆ ಮಾಡಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಅನೇಕ ಬಾರಿ ದೂರಿದರೂ ಪ್ರಯೋಜನವಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.
ಸಂಜೆವರೆಗೂ ತರಗತಿಗಳು: ವಿವಿಯಲ್ಲಿ ಸುಮಾರು 21 ಕೋರ್ಸ್‌ಗಳಿದ್ದು, ಸದ್ಯಕ್ಕೆ 1400 ವಿದ್ಯಾರ್ಥಿಗಳ ಪ್ರವೇಶಾತಿ ಇದೆ. ಕೋಣೆಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಬೆಳಗ್ಗೆ ಮತ್ತು ಸಂಜೆ ಎರಡು ಕಾಲಕ್ಕೆ ತರಗತಿಗಳನ್ನು ನಡೆಸಲಾಗುತ್ತಿದೆ. ಮಧ್ಯಾಹ್ನದವರೆಗೂ ಬಸ್ ಸೌಲಭ್ಯ ಚನ್ನಾಗಿದ್ದು, ನಂತರ ಬಸ್‌ಗಳ ಓಡಾಟ ವಿರಳವಾಗಿದೆ. ಕುಲಪತಿಗಳ ವಿನಂತಿ ಮೇರೆಗೆ ಸಂಜೆ 6 ಗಂಟೆ ಸುಮಾರಿಗೆ ಒಂದು ಬಸ್ ಬರುತ್ತಿದ್ದು, ಬೇಗ ಮನೆಗೆ ಹೋಗಬೇಕು ಎನ್ನುವವರಿಗೆ ಬಸ್ ಸಿಗುತ್ತಿಲ್ಲ ಎನ್ನುವುದು ವಿದ್ಯಾರ್ಥಿನಿಯರ ದೂರಾಗಿದೆ.
ವಿಶ್ವವಿದ್ಯಾಲಯ ಆರಂಭವಾಗಿ ಎರಡು ವರ್ಷವಾಗಿದ್ದು, ಇನ್ನೂ ಸಾಕಷ್ಟು ಸೌಲಭ್ಯಗಳು ಸಿಗಬೇಕಿದೆ. ಇನ್ನೂ ವಸತಿ ನಿಲಯಗಳು ಆರಂಭವಾಗದ ಕಾರಣ ಎಲ್ಲರೂ ಮನೆಯಿಂದಲೇ ಬರುತ್ತಾರೆ. ಸಾರಿಗೆ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದೆ.
-ಡಾ| ವಿಶ್ವನಾಥ, ಕುಲಸಚಿವ, ರಾಯಚೂರು ವಿವಿ
ವಿಶ್ವವಿದ್ಯಾಲಯದ ಬೇಡಿಕೆಯನುಸಾರ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಕೆಲ ದಿನಗಳಿಂದ ಸಂಜೆ ಕೂಡ ಬಸ್‌ಗಳು ಓಡಾಡುತ್ತಿವೆ. ವೇಗದೂತ ಬಸ್ ಗಳು ನಿಲುಗಡೆ ಮಾಡುವುದಿಲ್ಲ. ಆ ಮಾರ್ಗವಾಗಿ ಸಂಚರಿಸುವ ಸಾಮಾನ್ಯ ಬಸ್‌ಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಹೆಚ್ಚುವರಿ ಬಸ್‌ಗಳ ಬೇಡಿಕೆ ಇದ್ದರೆ ಪರಿಶೀಲಿಸಲಾಗುವುದು.
-ವೆಂಕಟೇಶ, ವಿಭಾಗೀಯ ನಿಯಂತ್ರಣಾಧಿಕಾರಿ, ಸಾರಿಗೆ ನಿಗಮ