Advertisement

ವೇತನ ರಹಿತ ಸೇವೆಗೆ ಮುಂದಾದ ಸಾರಿಗೆ ನೌಕರ

09:34 AM Jun 09, 2020 | Suhan S |

ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ ನಂತರ ಜೀವನ ನಿರ್ವಹಣೆ ದುಸ್ತರವಾಗುತ್ತಿದೆ. ಆದರೆ ಇಂತಹ ಸಂದಿಗ್ಧ ಸ್ಥಿತಿಯಲ್ಲೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯೊಬ್ಬರು ಸಂಸ್ಥೆಯ ಆರ್ಥಿಕ ಸಂಕಷ್ಟಕ್ಕೆ ಮಿಡಿದು ತಮ್ಮ ಎರಡು ತಿಂಗಳ ವೇತನ ನಿರಾಕರಿಸಿ ವೇತನ ರಹಿತ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

Advertisement

ಲಾಕ್‌ಡೌನ್‌ ಸಂಕಷ್ಟ ಹಲವು ಕ್ಷೇತ್ರಗಳಲ್ಲಿ ಸಮಸ್ಯೆ ತಂದೊಡ್ಡಿದೆ. ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಮಾಡಿ ವೇತನ ನೀಡಿದರೆ ಸಾಕು ಎನ್ನುವ ಮನಸ್ಥಿತಿ ನೌಕರರದ್ದು. ಆದರೆ ಇದಕ್ಕೆ ಅಪವಾದ ಎನ್ನುವಂತೆ ಧಾರವಾಡ ವಿಭಾಗದ ದಾಂಡೇಲಿ ಘಟಕದಲ್ಲಿ ಕೆಎಸ್‌ಟಿ ಕಾನ್‌ಸ್ಟೇಬಲ್‌ಎಲ್‌.ಆರ್‌.ಬೂದಿಹಾಳ ತಮ್ಮ ಎರಡು ತಿಂಗಳ ವೇತನ ಪಾವತಿ ಮಾಡದಂತೆ ಮನವಿ ಮಾಡಿದ್ದಾರೆ. ಕಳೆದ 56ದಿನಗಳಿಂದ ಸಂಸ್ಥೆ ಬಸ್‌ಗಳು ಸ್ಥಗಿತಗೊಂಡಿದ್ದು, ಈಗ ಕಾರ್ಯಾಚರಣೆಗೊಳ್ಳುತ್ತಿದ್ದರೂ ನಿರೀಕ್ಷಿತ ಆದಾಯ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಸ್ಥೆಯಿಂದ ಪೂರ್ಣ ವೇತನ ಬಯಸುವುದು ಸರಿಯಲ್ಲ ಎಂದ ಇವರು ಎರಡು ತಿಂಗಳು ವೇತನ ರಹಿತ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

ಸಂಸ್ಥೆ ಎಲ್ಲವನ್ನೂ ನೀಡಿದೆ: ಕಳೆದ 34 ವರ್ಷಗಳಿಂದ ಬೂದಿಹಾಳ ಸೇವೆ ಸಲ್ಲಿಸುತ್ತಿದ್ದು, ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ-ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್ಯ, ರಾಷ್ಟ್ರ ಪುರಸ್ಕಾರಗಳನ್ನು ಪಡೆದಿದ್ದಾರೆ. 1986ರಲ್ಲಿ ಸಂಸ್ಥೆಯಲ್ಲಿ ಉದ್ಯೋಗ ನೀಡಿತು. ತಂದೆ-ತಾಯಿ, ಸಹೋದರ ಸೇರಿದಂತೆ ಇಡೀ ಕುಟುಂಬವನ್ನು ಕೈ ಹಿಡಿದು ನಡೆಸಿದೆ. ಅಲ್ಲಿಂದ ಇಲ್ಲಿಯವರೆಗೂ ಯಾವುದಕ್ಕೂ ಕೊರತೆಯಾಗದಂತೆ ಜೀವನ ಬಂಡಿ ಸಾಗಿಸಲು ಸಂಸ್ಥೆಯೇ ಕಾರಣವಾಗಿದೆ.

ಜೀವನ ಜತೆಗೆ ಹೆಸರನ್ನು ಸಂಸ್ಥೆ ನೀಡಿದ್ದು, ಸಂಸ್ಥೆಯ ಋಣ ತೀರಿಸಲು ನನ್ನ ಸಣ್ಣ ನಿರ್ಧಾರ ಎನ್ನುತ್ತಾರೆ ಎಲ್‌.ಆರ್‌. ಬೂದಿಹಾಳ. ಅಪರೂಪದ ಘಟನೆ: ದೇಶ, ರಾಜ್ಯದಲ್ಲಿ ವಿಪತ್ತುಗಳು ಸಂಭವಿಸಿದಾಗ ಒಂದಿಷ್ಟು ನೆರವು ನೀಡುವುದು, ಅತೀ ಹೆಚ್ಚೆಂದರೆ ಅಧಿಕಾರಿಗಳ ಮಟ್ಟದಲ್ಲಿ ಒಂದು ತಿಂಗಳ ವೇತನ ಮೊತ್ತವನ್ನು ಪರಿಹಾರ ನಿಧಿಗೆ ಕಳುಹಿಸುವುದು ಸಾಮಾನ್ಯ. ಆದರೆ ತನ್ನ ಸಂಸ್ಥೆ ಸಂಕಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಡಿ ದರ್ಜೆ ನೌಕರರೊಬ್ಬರು ಎರಡು ತಿಂಗಳ ವೇತನ ನಿರಾಕರಿಸಿರುವುದು ಸಾರಿಗೆ ಸಂಸ್ಥೆ ಇತಿಹಾಸದಲ್ಲಿ ಅಪರೂಪ. ಲಿಖೀತ ಮನವಿ ಸ್ವೀಕರಿಸಿರುವ ಅಧಿಕಾರಿಗಳಿಗೆ ಮುಂದೆ ಏನು ಮಾಡಬೇಕೆಂಬುದು ತೋಚದಂತಾಗಿ ಇದಕ್ಕೆ ಅವಕಾಶವಿದೆಯಾ ಎನ್ನುವ ಚಿಂತನೆ ನಡೆಸಿದ್ದರು.

ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ತಮ್ಮ ಸ್ವಗ್ರಾಮ ಬಾಗಲಕೋಟೆ ಜಿಲ್ಲೆಯ ಯಡಳ್ಳಿಯಲ್ಲಿದ್ದರು. ಮೇಲಾಗಿ 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ನೀಡಬೇಕೆಂದು ಸರಕಾರದ ಆದೇಶ ನೀಡಿತ್ತು. ಆದರೆ ಲಾಕ್‌ಡೌನ್‌ನಿಂದ ಗ್ರಾಮದಲ್ಲಿ ಉಳಿದುಕೊಂಡರೆ ತಮ್ಮ ಸಹದ್ಯೋಗಿಗಳಿಗೆ ಕಾರ್ಯಭಾರ ಹೆಚ್ಚಾಗುತ್ತದೆ ಎಂದು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಒಂದು ಕಾರು ತರಿಸಿಕೊಂಡು ಕರ್ತವ್ಯದಲ್ಲಿ ತೊಡಗಿದ್ದಾರೆ. ಇನ್ನೂ ಎರಡು ತಿಂಗಳ ಕಾಲ ಘಟಕದಲ್ಲಿ ಉಳಿದ ಕೆಲ ಸಿಬ್ಬಂದಿಗೆ ಊಟದ ಸಮಸ್ಯೆಯಾಗದಂತೆ ನೋಡಿಕೊಂಡು ಮಾನವೀಯತೆ ಮೆರೆದಿದ್ದಾರೆ. ಕರ್ತವ್ಯ ಹಾಗೂ ಸಂಸ್ಥೆ ಬಗ್ಗೆ ಬಗ್ಗೆ ಇವರಿಗಿರುವ ಅಪಾರ ಕಾಳಜಿಯನ್ನು ಘಟಕದ ಸಿಬ್ಬಂದಿ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ.

Advertisement

ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ ಹೀಗಾಗಿ ತಮ್ಮ ಎರಡು ತಿಂಗಳ ವೇತನ ನಿರಾಕರಿಸಿ, ವೇತನ ರಹಿತ ಸೇವೆಗೆ ಮನವಿ ಮಾಡಿರುವುದು ಅಪರೂಪದ ಘಟನೆ. ಸಂಸ್ಥೆಯ ಬಗ್ಗೆ ಇರುವ ಇವರಿಗೆ ಕಾಳಜಿ, ಪ್ರೀತಿ, ಋಣಭಾರ ಇನ್ನಿತರೆ ಸಿಬ್ಬಂದಿಗೆ ಮಾದರಿಯಾಗಿದೆ.- ಬಸಲಿಂಗಪ್ಪ ಬೀಡಿ, ವಿಭಾಗೀಯ ನಿಯಂತ್ರಣಾಧಿಕಾರಿ. ಧಾರವಾಡ ವಿಭಾಗ

ಇಡೀ ಜೀವನ ರೂಪಗೊಂಡಿರುವುದು ಸಾರಿಗೆ ಸಂಸ್ಥೆಯಿಂದ. ಬದುಕು ಹಾಗೂ ಬದುಕಿಗೊಂದು ಅರ್ಥ ಮತ್ತು ಹೆಸರು ಬಂದಿರುವುದು ನನ್ನ ಸಂಸ್ಥೆಯಿಂದ. ಪ್ರತಿಯೊಂದು ಹೆಜ್ಜೆಗೂ ನನ್ನ ಸಂಸ್ಥೆ ಬೆಂಬಲವಾಗಿ ನಿಂತಿದೆ. ಮೂರು ದಶಕ ಇಡೀ ಕುಟುಂಬ ಸಲುಹಿಸಿದ ನನ್ನ ಸಂಸ್ಥೆ ಸಂಕಷ್ಟದಲ್ಲಿದೆ. ದೊಡ್ಡ ಸಂಸ್ಥೆಗೆ ನೆರವು ನೀಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲದಿದ್ದರೂ, ನನ್ನಿಂದಾಗುವ ಸಣ್ಣ ಸೇವೆ ಮಾಡಿದ್ದೇನೆ. -ಎಲ್‌.ಆರ್‌.ಬೂದಿಹಾಳ, ಕೆಎಸ್‌ಟಿ ಕಾನಸ್ಟೇಬಲ್‌

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next