Advertisement

ಸಂಪರ್ಕ ರಹಿತ ಹಳ್ಳಿಗಳಿಗೂ ಸಾರಿಗೆ ಬಸ್‌!

05:44 PM Feb 08, 2022 | Team Udayavani |

ಮಸ್ಕಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡಿದರೂ ಇಲ್ಲಿನ ಹಳ್ಳಿಗಳು ಮಾತ್ರ ಸಾರಿಗೆ- ಸಂಪರ್ಕದಿಂದ ವಂಚಿತವಾಗಿದ್ದವು. ಗಡಿಭಾಗ, ಕಟ್ಟಕಡೆಯ ಹಳ್ಳಿಗಳು ಎನ್ನುವ ಕಾರಣಕ್ಕೆ ತತ್ಸಾರಕ್ಕೆ ತುತ್ತಾಗಿದ್ದ ಈ ಹಳ್ಳಿಗಳಿಗೀಗ ಸಾರಿಗೆ ಇಲಾಖೆ ಬಸ್‌ ಗಳ ಓಡಾಟದಿಂದ ಶುಕ್ರದೆಸೆ ತಿರುಗಿದೆ.

Advertisement

ತಾಲೂಕಿನ ಮ್ಯಾದರಾಳ, ಗೊಲ್ಲರಹಟ್ಟಿ, ವೀರಾಪೂರ, ಮಂಗಮನಹಟ್ಟಿ, ರಂಗಪ್ಪನ ತಾಂಡಾ, ದೇಸಾಯಿ ಬೋಗಾಪುರ, ದುರ್ಗ ಕ್ಯಾಂಪ್‌, ನಾರಾಯಣ ನಗರ ಕ್ಯಾಂಪ್‌ ಇವು ರಿಮೋಟ್‌ ಹಳ್ಳಿಗಳು. ಇಷ್ಟು ಹಳ್ಳಿಗಳು ಸ್ವತಂತ್ರ ದಕ್ಕಿದ 75 ವರ್ಷದ ಬಳಿಕ ಸಾರಿಗೆ ಇಲಾಖೆಯ ಬಸ್‌ಗಳ ದರ್ಶನ ಪಡೆದಿವೆ.

ನೆಟ್ಟಗಿರದ ರಸ್ತೆಗಳು, ಕಿರಿದಾದ ಸೇತುವೆ, ಬಸ್‌ ಓಡಿಸಿದರೆ ನಿರೀಕ್ಷಿತ ಆದಾಯವಿಲ್ಲ ಎನ್ನುವ ಕಾರಣಕ್ಕೆ ಬಸ್‌ಗಳನ್ನೇ ಕಾಣದಾಗಿದ್ದ ಇಷ್ಟು ಹಳ್ಳಿಗಳಲ್ಲೀಗ ಪ್ರತ್ಯೇಕ ಬಸ್‌ಗಳ ಓಡಾಟ ಆರಂಭವಾಗಿದ್ದು, ಇದರಿಂದಾಗಿ ಈ ಹಳ್ಳಿಗರಲ್ಲಿ ಸಂತಸ ಮೂಡಿದೆ.

ಕಳೆದ ಒಂದೆರಡು ವಾರಗಳಿಂದ ಮಸ್ಕಿ ಸಾರಿಗೆ ಘಟಕದಿಂದ ಹೊಸದಾಗಿ ಬಸ್‌ ಓಡಾಟ ಆರಂಭಿಸಲಾಗಿದ್ದು, ಖಾಸಗಿ ವಾಹನ ಇಲ್ಲವೇ ಪಾದಯಾತ್ರೆಯನ್ನೇ ಅವಲಂಬಿಸಿದ್ದವರಿಗೆ ದಿನಕ್ಕೆ ಐದರಿಂದ ಆರು ಕಿ.ಮೀ. ನಡೆದಾಡುವ ಕಷ್ಟ ತಪ್ಪಿತು ಎನ್ನುವ ಸಂತಸದ ಭಾವ ಮೂಡಿದೆ.

ಮಸ್ಕಿ ಸಾರಿಗೆ ಘಟಕ ಹಲವು ವರ್ಷಗಳಿಂದ ನಷ್ಟದಲ್ಲಿಯೇ ಇದೆ. ನಿರೀಕ್ಷಿತ ಆದಾಯವಿಲ್ಲದೇ ಸೊರಗಿದ್ದರೂ ಕಷ್ಟ-ನಷ್ಟದ ನಡುವೆ ಸಾರಿಗೆ ಘಟಕ ಸಾಗಿದೆ. ಇನ್ನು ಕೋವಿಡ್‌-19 ಕಾರಣದಿಂದಾಗಿ ಮತ್ತಷ್ಟು ನಷ್ಟದ ಭಾರ ಹೆಚ್ಚಿದ್ದರೂ ಸರಿದೂಗಿಸುವ ಪ್ರಯತ್ನವಾಗಿ ಈಗ ಮಸ್ಕಿ ಸಾರಿಗೆ ಘಟಕವೂ ಹೊಸ ರೂಟ್‌ಗಳನ್ನು ಆರಂಭಿಸುವ ಮೂಲಕ ಸವಾಲಿನ ಕೆಲಸಕ್ಕೆ ಕೈ ಹಾಕಿ ಜನರಿಂದ ಸೈ ಎನಿಸಿಕೊಂಡಿದೆ.

Advertisement

ಮ್ಯಾದರಾಳ, ದುರ್ಗ ಕ್ಯಾಂಪ್‌, ಗೊಲ್ಲರಹಟ್ಟಿ, ವೀರಾಪೂರ, ಮಂಗನಹಟ್ಟಿ, ರಂಗಪ್ಪನಹಟ್ಟಿ, ದೇಸಾಯಿ ಬೋಗಾಪೂರ ಮಾರ್ಗಗಳಲ್ಲಿ ನಿರೀಕ್ಷಿತ ಆದಾಯ ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ ಇಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ದಿನಕ್ಕೆ ಎರಡು ಬಾರಿ ಬಸ್‌ಗಳನ್ನು ಓಡಿಸಲಾಗುತ್ತಿದೆ.

ಮಸ್ಕಿ- ಗುಂಡಾ, ಸಿಂಧನೂರು- ಗುಂಡಾದವರೆಗೆ ಮಾತ್ರ ಇದುವರೆಗೂ ಬಸ್‌ ಓಡಾಡುತ್ತಿದ್ದವು. ಗುಂಡಾ ಗ್ರಾಮದಿಂದ ಆಚೆಗೆ ಗುಡ್ಡು-ಗಾಡು ಪ್ರದೇಶದಲ್ಲಿದ್ದ ಮಂಗನಹಟ್ಟಿ, ಗೊಲ್ಲರಹಟ್ಟಿಗೆ ಬಸ್‌ ಗಳೇ ಇದ್ದಿಲ್ಲ. ಖಾಸಗಿ ವಾಹನಗಳ ಓಡಾಟವೂ ವಿರಳ. ಹೀಗಾಗಿ ಇಲ್ಲಿನ ಜನ ಪ್ರತಿಯೊಂದುಕ್ಕೂ ನಡೆದಾಡಿಕೊಂಡೇ ಬರಬೇಕಿತ್ತು. ಮಹಿಳೆಯರು, ಮಕ್ಕಳು, ವೃದ್ಧರು ಆಸ್ಪತ್ರೆ ಸೇರಿದಂತೆ ಇನ್ನಿತರ ಕಡೆ ತೆರಳಲು ಸರ್ಕಸ್‌ ನಡೆಸುವಂತಾಗಿತ್ತು. ಆದರೆ, ಈಗ ಬಸ್‌ಗಳ ಓಡಾಡದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮಸ್ಕಿ ಘಟದಿಂದ ಹೊಸದಾಗಿ ಮಸ್ಕಿ-ಸಿಂಧನೂರು ತಡೆರಹಿತ ವಾಹನಗಳನ್ನು ಬಿಡಲಾಗಿದೆ. ಎರಡು ಪ್ರತ್ಯೇಕ ಬಸ್‌ ತಡೆರಹಿತವಾಗಿ ಓಡಾಡಲು ಆರಂಭ ಮಾಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ.

ಗಡಿ ಭಾಗದಲ್ಲಿನ ಹಲವು ಹಳ್ಳಿಗಳಿಗೆ ಬಸ್‌ ಸೌಲಭ್ಯ ಇದ್ದಿಲ್ಲ. ಅಂತಹ ಹಳ್ಳಿಗಳನ್ನು ಗುರುತು ಮಾಡಿ, ಅಲ್ಲಿನ ಜನರ ಬೇಡಿಕೆಯನ್ವಯ ಈಗ ಬಸ್‌ ಓಡಿಸಲಾಗುತ್ತಿದೆ. -ಶಿವಶಂಕರ ಪಾಟೀಲ್‌, ಘಟಕ ವ್ಯವಸ್ಥಾಪಕ, ಸಾರಿಗೆ ಇಲಾಖೆ ಮಸ್ಕಿ

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next