ರಬಕವಿ-ಬನಹಟ್ಟಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಅಭಿವೃದ್ಧಿಗಾಗಿ ಈ ಬಾರಿಯೂ 400 ಬಸ್ ಗಳ ಖರೀದಿಸಲಾಗುವುದು. ಅದೇ ರೀತಿ ಅಂದಾಜು 9 ಸಾವಿರ ಮಂದಿಯಷ್ಟು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ರಬಕವಿ ಬನಹಟ್ಟಿ ಅವಳಿ ನಗರಗಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣಗಳ ಶನಿವಾರ ಉದ್ಘಾಟಿಸಿ ಮಾತನಾಡಿ ರಬಕವಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ಇಲ್ಲಿಯೇ 2 ಸಾವಿರ ಮಂದಿ ನೇಮಕಕ್ಕೆ ಆದೇಶ ನೀಡಲಾಗಿದೆ. 53 ಮಂದಿ ಅಧಿಕಾರಿಗಳ ನೇಮಕಕ್ಕಾಗಿ ಅನುಮತಿ ನೀಡಲಾಗಿದೆ. ಇನ್ನು ಹೆಚ್ಚಿನ ಸಿಬ್ಬಂದಿಗಳ ನೇಮಕಕ್ಕೆ ಹಣಕಾಸು ವಿಭಾಗದ ಸಮ್ಮತಿಗೆ ಕಳಿಸಲಾಗಿದೆ. ನಾನು ಸಚಿವನಾಗಿದ್ದಾಗ ಹೆಚ್ಚು ಬಸ್ ನಿಲ್ದಾಣಗಳ ಆರಂಭಿಸಿದ್ದೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ಜಮಖಂಡಿ ಮತ್ತು ಮುಧೋಳ ಘಟಕಗಳು ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ನೀಡುವ ಘಟಕಗಳಾಗಿವೆ. ಶಕ್ತಿ ಯೋಜನೆಯಿಂದ ಇಲಾಖೆಗೆ ರೂ. 264.37 ಕೋಟಿಯಷ್ಟು ಆದಾಯ ಬಂದಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ದೂರದ ಊರುಗಳಿಗೆ ತೆರಳಲು ಇನ್ನಷ್ಟು ಬಸ್ ಗಳ ಓಡಿಸುವಂತೆ ತಿಮ್ಮಾಪುರ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಮಾಡಿಕೊಂಡರು.
ವಾಯವ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಗೌಡ ಕಾಗೆ ಮಾತನಾಡಿ, ಜನರು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸರ್ಕಾರದ ಆಸ್ತಿಗಳ ರಕ್ಷಣೆ ಮಾಡುವುದು ಸಾರ್ವಜನಿಕರ ಕರ್ತವ್ಯವಾಗಿದೆ. ಈ ಭಾಗದ ಜನರು ತೀರ್ಥಕ್ಷೇತ್ರಗಳಿಗೆ ತೆರಳಲು ಇನ್ನಷ್ಟು ಬಸ್ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ ಬುದ್ನಿ, ಮಹಾಲಿಂಗಪುರ ಪುರಸಭೆಯಅಧ್ಯಕ್ಷ ಯಲ್ಲನಗೌಡ ಪಾಟೀಲ,ಅಪ್ಪರ ಜಿಲ್ಲಾಧಿಕಾರಿ ಪರಶುರಾಮ ಸಿನ್ನಾಳಕರ, ವಾಯವ್ಯ ರಸ್ತೆ ಸಾರಿಗೆ ನಿಗಮದ ಹುಬ್ಬಳ್ಳಿಯ ಕಚೇರಿಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಬಾಗಲಕೋಟೆಯ ನಿಯಂತ್ರಣಾಧಿಕಾರಿ ನಿತಿನ ಹೆಗಡೆ, ತಹಶೀಲ್ದಾರ್ ಗಿರೀಶ ಸ್ವಾದಿ, ಕಾಮಗಾರಿ ಎಂಜಿನಿಯರ್ ದಿವಾಕರ್ ಯರಗೊಪ್ಪ, ಸಿದ್ದು ಕೊಣ್ಣೂರ, ಡಾ.ಪದ್ಮಜೀತ ನಾಡಗೌಡ ಪಾಟೀಲ, ರಾಹುಲ ಕಲೂತಿ, ಮಲ್ಲಿಕಾರ್ಜುನ ನಾಶಿ, ಬಸವರಾಜ ತೆಗ್ಗಿ, ದೇವಲ ದೇಸಾಯಿ, ರಬಕವಿ ಬನಹಟ್ಟಿ ನಗರಸಭೆಯ ಸದಸ್ಯರು ಸೇರಿ ಅನೇಕರಿದ್ದರು.