Advertisement

ಪಾರದರ್ಶಕ ಆಡಳಿತ ವ್ಯವಸ್ಥೆಗೆ  ಬಲಿಷ್ಠ ಲೋಕಾಯುಕ್ತ

10:43 AM Feb 25, 2017 | Team Udayavani |

ಉಡುಪಿ: ಶಿಕ್ಷಣ ಮತ್ತು ಆರೋಗ್ಯ ಸಮಾಜದ ಮುಖ್ಯ ಅಂಗವಾಗಿದ್ದು, ಉಡುಪಿ ಜಿಲ್ಲೆಯ ಜನರಿಗೆ ನೀಡುವ ಈ ಸೇವೆ ಮಾದರಿಯಾಗಿರಲಿ. ಮುಂದಿನ ಐದು ವರ್ಷ ಈ ಜಿಲ್ಲೆಯಿಂದ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ದೂರು ಬರಬಾರದು ಎಂದು ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ತಾಕೀತು ಮಾಡಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಸೇವೆಯನ್ನು ನಿಷ್ಠೆಯಿಂದ ಮಾಡಿದರೆ ಲೋಕಾಯುಕ್ತಕ್ಕೆ ಬರುವ ದೂರು ಇಳಿಮುಖವಾಗಲಿದೆ ಎಂದರು.
ಶಿಕ್ಷಣ ಹಕ್ಕಿನಡಿ ಜಿಲ್ಲೆಯ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ಜಿಲ್ಲೆಯಲ್ಲಿ ಕೊರಗ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿ ಹೆಣ್ಣು ಮಕ್ಕಳು ಅರ್ಧದಲ್ಲೇ ಶಿಕ್ಷಣ ನಿಲ್ಲಿಸದಂತೆ ಪ್ರೇರಣಾ ಕಾರ್ಯ
ಕ್ರಮ ಹಮ್ಮಿಕೊಂಡಿರುವ ಬಗ್ಗೆ, ಕುಂಭಾಸಿ ಮಕ್ಕಳ ಮನೆ ಬಗ್ಗೆ ಡಿಡಿಪಿಐ ವಿವರಿಸಿದರು. ಕೊರಗ ಮಕ್ಕಳ ಹೆತ್ತವರಿಗೆ ಆಯೋಜಿಸುವ ಕೌನ್ಸೆಲಿಂಗ್‌ಗೆ ಖುದ್ದು ಹಾಜರಾಗಿ ಹೆತ್ತವರೊಂದಿಗೆ ಮಾತನಾಡುವುದಾಗಿ ಅವರು ನುಡಿದರು. 

ಸರಕಾರಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಲೋಕಾಯುಕ್ತರು, ಜನರು ಖಾಸಗಿ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆದು ಆರ್ಥಿಕವಾಗಿ ದಿವಾಳಿಯಾದ ಹಲವು ಉದಾಹರಣೆ  ತಮ್ಮ ಮುಂದಿದೆ. ಸರಕಾರಿ ಆರೋಗ್ಯ ವ್ಯವಸ್ಥೆ ನಂಬಿಕಸ್ಥವಾಗಿ ಬೆಳೆಯಬೇಕು. ಈ ಬಗ್ಗೆ  ಅನಾಮಿಕ ದೂರುಗಳು ಬರಬಾರದು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ, ತೋಟಗಾರಿಕೆ, ಪಂಚಾಯತ್‌, ಸಮಾಜ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ, ಪಶು ಸಂಗೋಪನೆ, ಕಂದಾಯ, ಪೊಲೀಸ್‌ ಇಲಾಖೆಗಳ ಪರಾಮರ್ಶೆ ಹಾಗೂ ಇಲಾಖಾ ಸಮಸ್ಯೆಗಳನ್ನು ಆಲಿಸಿದರು. ಪಶುಪಾಲನೆ, ಕೃಷಿ, ತೋಟಗಾರಿಕೆ ವ್ಯವಸ್ಥೆ ಸುಧಾರಿಸಲು ಅಧಿಕಾರಿಗಳು ಕೈಗೊಂಡ ಕ್ರಮಗಳನ್ನು ಆಲಿಸಿದರು. 

ಜನರಿಗಾಗಿ ರೂಪಿಸುವ ಕಾರ್ಯಕ್ರಮಗಳು ಜನರನ್ನು ತಲುಪಲೇಬೇಕು. ಇದಕ್ಕಾಗಿ ತಡೆ ಒಡ್ಡುವ ಕಾರಣಗಳ ಬಗ್ಗೆ ನನಗೆ ಮಾಹಿತಿಬೇಕು. ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗ ಬಾರದು ಎಂಬುದು ಉದ್ದೇಶವಾಗಬೇಕು ಎಂದು ಅವರು ಹೇಳಿದರು. 

Advertisement

ಅರಣ್ಯ ಇಲಾಖೆಯಿಂದ ದೊರಕುವ ಯೋಜನೆಗಳ ಬಗ್ಗೆ ಡಿಸಿಎಫ್ ವಿವರಿಸಿದರು. ಅರಣ್ಯ ಸಂರಕ್ಷಣೆ ಅಗತ್ಯವಾಗಬೇಕು. ಇಲಾಖೆ ವಿಜಿಲಂಟ್‌ ಆಗಿರಬೇಕು. ಮರ ಕಡಿಯುವುದಕ್ಕೆ ಅನುಮತಿ, ಅದಕ್ಕೆ ಬದಲಾಗಿ ಗಿಡನೆಟ್ಟ ಬಗ್ಗೆ ಸಮೀಕ್ಷೆ ಮಾಡಿ ಎಂದರು. 

ಉತ್ತಮ ಗುಣಮಟ್ಟದ ಆಹಾರ ಪೂರೈಕೆಗೆ ಆನ್‌ಲೈನ್‌ ಮೂಲಕ ಎಲ್ಲ ರೇಷನ್‌ ಅಂಗಡಿಗಳ ಮೇಲೆ ಕಣ್ಣಿಡಿ ಎಂದ ಅವರು, 15 ದಿನಗಳೊಳಗೆ ಇದನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಿದರು. ಫ‌ಲಾನುಭವಿಗಳಿಗೆ ಆಹಾರಗಳು ಲಭ್ಯವಾಗಲಿ ಎಂದರು. 

ಮರಳುಗಾರಿಕೆ-ಸೂಕ್ತ ಕ್ರಮ
ಮರಳುಗಾರಿಕೆ ನಮ್ಮ ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆ ಎಂಬ ಮಾಹಿತಿಯಿದ್ದು, ಮರಳುಗಾರಿಕೆಯಿಂದಲೇ ಊರಿಗೆ ಊರೇ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಕಾನೂನು ಮೀರಿ ನಡೆದರೆ ಶಿಕ್ಷೆ ಖಂಡಿತ. ಕಾನೂನು ಪಾಲಿಸಲು ಜಿಲ್ಲಾಧಿಕಾರಿ ನೆರವು ಪಡೆಯಿರಿ ಎಂದರು.

ನಗರಸಭೆಗೆ ಸೂಚನೆ
ನಗರಸಭಾ ಪೌರಾಯುಕ್ತರ ಬಳಿ ಫ‌ುಟ್‌ಪಾತ್‌ನಲ್ಲಿ ಕಟ್ಟಡಗಳೆದ್ದಿವೆಯಾ? ಆನ್‌ಲೈನ್‌ನಲ್ಲಿ 45 ದಿನಗಳೊಳಗೆ ಮನೆ ಲೈಸೆನ್ಸ್‌ ಅನುಮತಿ ನೀಡಬೇಕು. ಸೆಟ್‌ಬ್ಯಾಕ್‌ ನೀತಿ ಪಾಲಿಸಿ. ಸೆಟ್‌ ಬ್ಯಾಕ್‌ ನೀತಿ ಅನುಸರಿಸಿ ಎಂದು ಲೋಕಾ ಯುಕ್ತ ಹೇಳಿದರು. 

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಲೋಕಾಯುಕ್ತ ಎಸ್‌ಪಿ ರಶ್ಮಿ, ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತೆ ಶಿಲ್ಪಾ$ ನಾಗ್‌, ಅಡಿಷನಲ್‌ ಎಸ್‌ಪಿ ವಿಷ್ಣುವರ್ಧನ್‌ ಮೊದಲಾದವರು ಇದ್ದರು. 

ಸಿಜೇರಿಯನ್‌ ಹೆರಿಗೆ ದಂಧೆ !
-ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇರಬಾರದು. ತಾಯಿ, ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸಿಜೇರಿಯನ್‌ ಹೆರಿಗೆ ದಂಧೆಯಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಿ. 
– ಅಧಿಕಾರಿಗಳು ನೀಡಿದ ಮಾಹಿತಿಗಳು ಸತ್ಯವಾಗಿದ್ದರೆ ಸಂತೋಷ. ಇದಲ್ಲದೆ ಬೇರೆಯೇ ಪರಿಸ್ಥಿತಿ ಇದೆ ಎಂದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದು ನಿಶ್ಚಿತ.

– ಭ್ರಷ್ಟಾಚಾರ ಮಾತ್ರವಲ್ಲ, ಸಕಾಲದಲ್ಲಿ ಕರ್ತವ್ಯ ನಿರ್ವಹಣೆ ಮಾಡದಿರುವ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತ ವ್ಯಾಪ್ತಿಗೆ ಬರುತ್ತದೆ.

-ಲೋಕಾಯುಕ್ತ ಶಕ್ತಿಯುತವಾಗಿದೆ. ಎಲ್ಲ ರೀತಿಯಲ್ಲಿ ಜನರ ಹಿತ ಕಾಯಲು ಸಬಲವಾಗಿದೆ. ಎಲ್ಲ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ನಿಃಶಕ್ತವಾಗಿಲ್ಲ.

 -ನ್ಯಾ| ವಿಶ್ವನಾಥ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next