ಬೆಳಗಾವಿ: ಕೆಲಸವಿಲ್ಲದೇ ಭಿಕ್ಷೆ ಬೇಡುತ್ತ ಅಲೆಯುತ್ತಿದ್ದ ಮಂಗಳಮುಖೀಯರು ಈಗ ಮಿನಿ ಕ್ಯಾಂಟೀನ್ ತೆರೆದು ಸ್ವ ಉದ್ಯೋಗ ಮಾಡುವ ಮೂಲಕ ಇತರರಿಗೆ ಪ್ರೇರಣೆ ಆಗಿದ್ದಾರೆ. ಅನೇಕ ವರ್ಷಗಳಿಂದ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಅಲೆಯುತ್ತಿದ್ದ ಮೂವರು ಮಂಗಳಮುಖಿಯರು ಸಂಘ-ಸಂಸ್ಥೆಗಳ ಸಹಾಯ-ಸಹಕಾರದಿಂದ ಮಿನಿ ಕ್ಯಾಂಟೀನ್ ತೆರೆದಿದ್ದಾರೆ. ಅನೇಕ ವರ್ಷಗಳಿಂದ ಸಮಾಜದಿಂದ ದೂರ ಉಳಿದು ಭಿಕ್ಷೆ ಬೇಡುತ್ತ ಜೀವನ ನಡೆಸುತ್ತಿದ್ದರು. ಈಗ ಹ್ಯುಮ್ಯಾನಿಟಿ ಫೌಂಡೇಷನ್ ಎಂಬ ಸಂಸ್ಥೆಯ ಪ್ರೇರಣೆಯಿಂದಾಗಿ ಅದೆಲ್ಲವನ್ನೂ ಬಿಟ್ಟು ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.
ಚಂದ್ರಿಕಾ, ತರಾನಾ ಹಾಗೂ ಚೇತನಾ ಎಂಬ ಮಂಗಳಮುಖಿಯರು ಬೆಳಗಾವಿ ನಗರದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ನಗರದ ಬಸ್ ನಿಲ್ದಾಣ ಹಿಂಬದಿಯ ಕಂಟೋನ್ ಮೆಂಟ್ ಜಾಗದಲ್ಲಿ ಅಂಗಡಿ ತೆರೆದು ಉಪಾಹಾರ ತಯಾರಿಸಿ ಉದ್ಯೋಗ ನಡೆಸಿದ್ದಾರೆ. ನಿತ್ಯ ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಈ ಕ್ಯಾಂಟೀನ್‌ನಲ್ಲಿ ಕೇಸರಿಬಾತ್, ಉಪ್ಪಿಟ್ಟು, ಅವಲಕ್ಕಿ, ಭಡಂಗ, ಚಹಾ ಸೇರಿ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ತಯಾರಿಸುತ್ತಿದ್ದಾರೆ. ರಾತ್ರಿ 9ರವರೆಗೂ ಕ್ಯಾಂಟೀನ್ ತೆರೆದಿರುತ್ತದೆ.
ಮಂಗಳಮುಖೀಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಹ್ಯುಮ್ಯಾನಿಟಿ ಫೌಂಡೇಷನ್ ಸಂಸ್ಥೆ ಚಂದ್ರಿಕಾ, ತರಾನಾ ಹಾಗೂ ಚೇತನಾ ಅವರನ್ನು ಗುರುತಿಸಿ, ಕೌನ್ಸೆಲಿಂಗ್ ಮಾಡಿ, ಸಮಾಜದ ಮುಖ್ಯವಾಹಿನಿಗೆ ತಂದು ಆರ್ಥಿಕವಾಗಿ ಸಬಲರಾಗುವ ಬಗ್ಗೆ ತಿಳಿ ಹೇಳಿದೆ. ಇದಕ್ಕೆ ಒಪ್ಪಿಕೊಂಡ ಮಂಗಳಮುಖಿಯರು ಸ್ವ ಉದ್ಯೋಗ ಮಾಡಲು ಸಮ್ಮತಿಸಿದ್ದಾರೆ.
ಇನ್ನರ್ ವ್ಹೀಲ್ ಕ್ಲಬ್‌ನವರು ಫುಡ್ ಕಾರ್ಟ್ ಎಂಬ ಮಿನಿ ಕ್ಯಾಂಟೀನ್‌ಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಮೂರ್‍ನಾಲ್ಕು ದಿನಗಳ ಹಿಂದೆಯಷ್ಟೇ ಈ ಕ್ಯಾಂಟೀನ್ ಲೋಕಾರ್ಪಣೆಗೊಂಡಿದೆ. ಸದ್ಯ ಕಂಟೋನ್‌ಮೆಂಟ್ ಜಾಗದಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಯಿಂದ ಶಾಶ್ವತ ಜಾಗ ಸಿಗುವ ಭರವಸೆ ಸಿಕ್ಕಿದೆ. ಮಂಗಳಮುಖಿಯರು ನಡೆಸುತ್ತಿರುವ ಈ ಮಿನಿ ಕ್ಯಾಂಟೀನ್ ಬಗ್ಗೆ ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.
ಮಂಗಳಮುಖಿಯರಿಗಾಗಿ ರಿಯಾ ಇನೊಧೀಟೆಕ್ ಸಂಸ್ಥೆಯಿಂದ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಮೆಹಂದಿ, ಬ್ಯೂಟಿ ಪಾರ್ಲರ್, ಟೇಲರಿಂಗ್, ಕಂಪ್ಯೂಟರ್ ಸೇರಿ ವಿವಿಧ ತರಬೇತಿ ನೀಡ ಲಾಗುತ್ತಿದೆ. ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅನೇಕರಿಗೆ ಉಚಿತ ತರಬೇತಿ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ರಿಯಾ ಇನೊಧೀಟೆಕ್‌ನ ಲೀನಾ ಟೋಪಣ್ಣವರ ತಿಳಿಸಿದ್ದಾರೆ.
ಬೆಂಗಳೂರಿನ ನೆಲಮಂಗಲ ಹಾಗೂ ಬೆಳಗಾವಿಯ ಹತ್ತರಗಿ ಟೋಲ್ ನಾಕಾ ಬಳಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದೆ. ಇಂಥ ಕೆಲಸ ಬಿಟ್ಟು ಸ್ವಉದ್ಯೋಗ ಮಾಡಲು ನನಗೆ ಹ್ಯುಮ್ಯಾನಿಟಿ ಫೌಂಡೇಷನ್ ಬೆನ್ನೆಲುಬಾಗಿ ನಿಂತಿತು. ಹೀಗಾಗಿ ನಾವು ಮೂವರು ಸ್ನೇಹಿತರು ಸೇರಿ ಮಿನಿ ಕ್ಯಾಂಟೀನ್ ನಡೆಸುತ್ತಿದ್ದೇವೆ.
● ಚಂದ್ರಿಕಾ, ಕ್ಯಾಂಟೀನ್ ನಡೆಸುತ್ತಿರುವ ಮಂಗಳಮುಖಿ
ಮಂಗಳಮುಖಿಯರು ಬಹುತೇಕ ಭಿಕ್ಷೆ ಬೇಡುವುದು, ಸೆಕ್ಸ್ ವರ್ಕರ್ ಆಗಿದ್ದಾರೆ. ಇಂಥವರನ್ನು ಗುರುತಿಸಿ ಕೌನ್ಸೆಲಿಂಗ್‌ಗೆ ಒಳಪಡಿಸಿ ಸ್ವ ಉದ್ಯೋಗ ಮಾಡಲು ಪ್ರೇರಣೆ ನೀಡಲಾಗುತ್ತಿದೆ. ಮಂಗಳಮುಖೀಯರ ಕೌಟುಂಬಿಕ ಕಲಹ, ಆಸ್ತಿ ಜಗಳ ಹೀಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ.
● ತಾನಾಜಿ ಎಸ್., ಅಧ್ಯಕ್ಷರು, ಹ್ಯುಮ್ಯಾನಿಟಿ ಫೌಂಡೇಷನ್
ಮಂಗಳಮುಖಿಯರು ಸಮಾಜ ವಿರೋಧಿ ಕೆಲಸ ಬಿಟ್ಟು ತಮ್ಮ ಕಾಲು ಮೇಲೆ ತಾವು ನಿಂತುಕೊಳ್ಳಬೇಕು. ಸ್ವ ಉದ್ಯೋಗ ನಡೆಸಿ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಚಂದ್ರಿಕಾ, ತರಾನಾ ಹಾಗೂ ಚೇತನಾ ಅವರನ್ನು ಗುರುತಿಸಿ ಇನ್ನರ್ ವ್ಹೀಲ್ ಕ್ಲಬ್‌ನಿಂದ ಸಹಾಯ ನೀಡಲಾಗಿದೆ.
● ಕಿರಣ ನಿಪ್ಪಾಣಿಕರ, ಸಮಾಜ ಸೇವಕ
●
ಭೈರೋಬಾ ಕಾಂಬಳೆ