Advertisement
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಾಲಿರುವ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳನ್ನು ಇಂದಿಗೂ ಸರಿ ಮಾಡುವಲ್ಲಿ ಹೆಸ್ಕಾಂ ಇಲಾಖೆ ವಿಫಲವಾಗಿದೆ. ತಾಲೂಕಿನ ಬಿಸರಳ್ಳಿ ಗ್ರಾಮದ ರೈತ ಕಲ್ಲಯ್ಯಸ್ವಾಮಿ ಕಂದ್ಲಿ ಎಂಬುವರ ಹೊಲದಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆಯೇ ವಿದ್ಯುತ್ ಪರಿವರ್ತಕ ಕಂಬದ ಸಹಿತ ಬಿದ್ದಿರುವುದನ್ನು ಇದುವರೆಗೂ ಸರಿ ಮಾಡಿಲ್ಲ. ಇದರಿಂದಾಗಿ ರೈತ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
Related Articles
Advertisement
ನಿರಂತರ ಜ್ಯೋತಿ ಮಾರ್ಗದುದ್ದಕ್ಕೂ ಬಳಸಿರುವ ಇನ್ಸುಲೇಟರ್‌ಗಳು ಹಾಗೂ ಡಿಸ್ಕ್ಗಳು ಕಳಪೆ ಮಟ್ಟದ್ದಾಗಿರುವುದರಿಂದ ವಿದ್ಯುತ್ ಸರಬರಾಜು ಮೇಲಿಂದ ಮೇಲೆ ಸ್ಥಗಿತಗೊಳ್ಳುತ್ತಿದೆ. ಪಾಲಿಮಾರ್ ಇನ್ಸುಲೇಟರ್ ಹಾಗೂ ಪಾಲಿಮಾರ್ ಸ್ಟ್ರೇನ್‌ಗಳನ್ನು ಬಳಸುವುದರಿಂದ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದೆಂಬುದು ತಾಲೂಕಿನ ಬಹುತೇಕ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ.
ನಿಷ್ಕಾಳಜಿ ಪರಮಾವಧಿ: ಕೆಲವೆಡೆ ಹೊಸದಾದ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಅವೆಲ್ಲವೂ ಅವೈಜ್ಞಾನಿಕವಾಗಿ ನಿರ್ಮಿಸಿ ಸರಬರಾಜು ಮಾಡಲಾಗಿದೆ. ನೂತನ ಕಂಬಗಳ ಮೇಲ್ಮೈ ತುಂಬಾ ನುಣುಪಾಗಿರುವುದರಿಂದ ವಿದ್ಯುತ್ ಸರಬರಾಜು ನಿಲುಗಡೆಗೊಂಡಾಗ ಅದನ್ನು ಸರಿಪಡಿಸಲು ಪವರ್‌ಮನ್ (ಮಾರ್ಗಕರ್ಮಿ)ಗಳು ಕಂಬ ಹತ್ತಲು ಹರಸಾಹಸ ಪಡಬೇಕಾಗಿದೆ. ಜಿಲ್ಲಾ ಹಾಗೂ ಮೇಲ್ಮಟ್ಟದ ಅಧಿಕಾರಿಗಳ ನಿಷ್ಕಾಳಜಿ ಮೇಲಿನ ಎಲ್ಲ ಸಮಸ್ಯೆಗಳಲ್ಲಿ ಜಾಹೀರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸ್ವಲ್ಪ ಈ ಕಡೆಯೂ ಗಮನ ಹರಿಸುವರೇ ಕಾದುನೋಡಬೇಕಿದೆ.
ನಾಲ್ಕು ತಿಂಗಳ ಹಿಂದೆಯೇ ಬಿದ್ದ ಟಿಸಿ ಸರಿ ಮಾಡಾಕ ಲೈನ್ ಮನ್ ಹಿಂದೊಮ್ಮೆ ಬಂದ ನಿಲ್ಸಾಕ್ ನೋಡಿ ಹೋಗ್ಯಾನ್ರಿ. ಮತ್ತ ಇನ್ನೂ ತನಕ ಯಾರೂ ಬಂದೇ ಇಲ್ರಿ. ನಮ್ಮ ಹೊಲದಾಗ ಕೆಲ್ಸಾ ಮಾಡಾಕ ಕೂಲಿಗಳು ಬರಲಿಕ್ಕೂ ಹೆದರಾಕ್ಕತ್ತಾರ್ರೀ.-ಕಲ್ಲಯ್ಯಸ್ವಾಮಿ ಕಂದ್ಲಿ, ಹೊಲದ ಮಾಲೀಕ
-ಪ್ರಭಾಕರ ನಾಯಕ