ಬೆಂಗಳೂರು: ರಾಜ್ಯದಲ್ಲಿನ ಅತಂತ್ರ ರಾಜಕೀಯ ಬೆಳವಣಿಗೆಯ ನಡುವೆಯೇ ಸಾರಿಗೆ ಇಲಾಖೆಯಲ್ಲಿ ಮಾತ್ರ ಸಚಿವರು ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ!
ಎರಡು ವಾರಗಳಲ್ಲಿ ಈ ಇಲಾಖೆಯೊಂದರಲ್ಲಿ 250ಕ್ಕೂ ಅಧಿಕ ವರ್ಗಾವಣೆಗಳಾಗಿವೆ. ಸರಕಾರ ಅಸ್ಥಿರಗೊಳ್ಳು ತ್ತಿರುವ ಬೆನ್ನಲ್ಲೇ ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ಚಟುವಟಿಕೆಗಳು ಗರಿಗೆದರಿದ್ದು, ಈ ಸಂಬಂಧದ ದಾಖಲೆಗಳು “ಉದಯವಾಣಿ’ಗೆ ಲಭ್ಯವಾಗಿವೆ.
11 ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆಸದ ಸಾರಿಗೆ ಇಲಾಖೆ, ಕಳೆದ ವರ್ಷವಷ್ಟೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸಿದ್ಧತೆ ನಡೆಸಿತ್ತು. ಇದರಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಅಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಉನ್ನತ ಅಧಿಕಾರಿಗಳು ತಯಾರಿ ಕೂಡ ನಡೆಸಿದ್ದರು. ಇದರ ಮೊದಲ ಭಾಗವಾಗಿ ಸುಮಾರು ಒಂದು ಸಾವಿರ ನೌಕರರು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಆಯ್ಕೆಯಾಗಿದ್ದರು. ಅಷ್ಟರಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಿತು. ಇದರ ಬೆನ್ನಲ್ಲೇ ಸಾರಿಗೆ ಇಲಾಖೆಗೆ ನೂತನ ಸಾರಥಿಯಾಗಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅಧಿಕಾರದ ಚುಕ್ಕಾಣಿ ಹಿಡಿದರು.
ಈ ಮಧ್ಯೆ ನೂತನ ಸಚಿವರು ಮತ್ತು ಐಎಎಸ್ ಅಧಿಕಾರಿಗಳ ನಡುವೆ ಶುರುವಾದ ಶೀತಲ ಸಮರ ಆ ಅಧಿಕಾರಿಗಳ ಎತ್ತಂಗಡಿಯಲ್ಲಿ ಸಮಾಪ್ತಿಯಾಗಿತ್ತು. ಜತೆಗೆ ಅಂದಿನ ವರ್ಗಾವಣೆ ಪ್ರಕ್ರಿಯೆ ಕೂಡ ಮೂಲೆಗುಂಪಾಗಿತ್ತು.
ಇಲಾಖೆಯಲ್ಲಿ ಕೊನೆಯದಾಗಿ ವರ್ಗಾವಣೆ ಪ್ರಕ್ರಿಯೆ ನಡೆದದ್ದು 2008ರ ಎಪ್ರಿಲ್‌ನಲ್ಲಿ. ಅನಂತರದಿಂದ ಈವರೆಗೂ ಇಲಾಖೆ ಮೂಲಕ ಅಧಿಕೃತವಾಗಿ ಯಾವುದೇ ವರ್ಗಾವಣೆ ನಡೆದಿರಲಿಲ್ಲ. ಸದ್ಯ ತರಾತುರಿಯಲ್ಲಿ ವರ್ಗಾವಣೆಯಾಗಿರುವ 250 ಸಿಬಂದಿಯ ಪೈಕಿ 70ಕ್ಕೂ ಅಧಿಕ ಮಂದಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ್ದಾರೆ. ಇದರಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರ ಶಿಫಾರಸುಗಳೇ ಅಧಿಕ ಎಂದು ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ.
ಬಿಎಂಟಿಸಿಯಿಂದ ಬೇಡಿಕೆ ಹೆಚ್ಚು
ಬಿಎಂಟಿಸಿ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿ ಇಲ್ಲಿನ ಸಿಬಂದಿ ಲಾಭದಲ್ಲಿ ಮುಂದು ವರಿಯುತ್ತಿರುವ ಕೆಎಸ್‌ಆರ್‌ಟಿಸಿ ಮತ್ತು ಈಶಾನ್ಯ ಸಂಸ್ಥೆಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಬಿಎಂಟಿಸಿ ತಮ್ಮ ಸಿಬಂದಿಯ ಪಿಎಫ್, ಎಲ್‌ಐಸಿ ಮತ್ತು ಮೆಡಿಕಲ್ ಬಿಲ್‌ಗಳನ್ನು ಪಾವತಿ ಮಾಡಲಾಗದಂಥ ಪರಿಸ್ಥಿತಿಗೆ ಬಂದಿದೆ. ಹಾಗಾಗಿ ಇಲ್ಲಿಂದ ಅತೀ ಹೆಚ್ಚು ವರ್ಗಾವಣೆ ಅರ್ಜಿಗಳು ಬಂದಿವೆ.
ಸಾರಿಗೆ ಇಲಾಖೆಯಲ್ಲಿ ಒಂದು ವಾರದಿಂದ 250ರಿಂದ 300 ಚಾಲಕ, ನಿರ್ವಾಹಕ ಮತ್ತು ಮೆಕ್ಯಾನಿಕ್‌ಗಳ ವರ್ಗಾವಣೆ ನಡೆದಿದೆ. ಯಾವುದೇ ಪತ್ರಿಕಾ ಪ್ರಕಟನೆ ಹೊರಡಿಸದೆ ಸಚಿವರು ಅಕ್ರಮವಾಗಿ ವರ್ಗಾವಣೆ ದಂಧೆ ನಡೆಸುತಿದ್ದಾರೆ.
-ಯೋಗೇಶ್ , ಆರ್‌ಟಿಐ ಕಾರ್ಯಕರ್ತ