ಸುಳ್ಯ: ನಗರ ಪಂಚಾಯತ್ ಆವರಣದಲ್ಲಿ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ತ್ಯಾಜ್ಯ ಮಿಶ್ರಿತ ಕಸವನ್ನು ತತ್‌ಕ್ಷಣ ಸ್ಥಳಾಂತರಿಸುವಂತೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಸದ ರಾಶಿ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ನ.ಪಂ. ಕಚೇರಿ ಮುಂಭಾಗದ ಪ್ರವೇಶ ದ್ವಾರದ ಸನಿಹದ ಶೆಡ್‌ನಲ್ಲಿ ರಾಶಿ ಬಿದ್ದಿರುವ ಕಸ, ತ್ಯಾಜ್ಯ ಕಂಡು ಗರಂ ಆದರು. ನಗರದ ಕಸವನ್ನು ಇಲ್ಲಿ ಬೇರ್ಪಡಿಸುವಿಕೆ ವಿಧಾನವೇ ಸರಿಯಾದ ಕ್ರಮ ಅಲ್ಲ. ಒಂದು ವೇಳೆ ಬೇರ್ಪಡಿಸಿದರೂ ಅರ್ಧ ತಾಸಿನಲ್ಲಿ ವಿಲೇ ಮಾಡಬೇಕಿತ್ತು.
ಈಗ ಇಲ್ಲಿ ರಾಶಿ ಬಿದ್ದಿರುವ ಕಸವನ್ನು ಈ ಹಿಂದೆ ಎಲ್ಲಿ ಹಾಕುತ್ತಿದ್ದಿರೋ ಅಲ್ಲಿಗೆ ಸ್ಥಳಾಂತರಿಸುವಂತೆ ಸಚಿವರು ಎಂಜಿನಿಯರ್‌ಗೆ ಸೂಚನೆ ನೀಡಿದರು. ತ್ಯಾಜ್ಯದಿಂದ ಸೊಳ್ಳೆಗಳು ತುಂಬಿವೆ. ಇದರಿಂದ ಉಂಟಾಗಬಹುದಾದ ಪರಿಣಾಮಗಳು ಅಧಿಕಾರಿಗಳು ಏಕೆ ಯೋಚಿಸಿಲ್ಲ ಎಂದು ಪ್ರಶ್ನಿಸಿದರು. ತ್ಯಾಜ್ಯ ಡಂಪ್ ಮಾಡುತ್ತಿದ್ದ ಕಲ್ಚಪೆì ಭರ್ತಿ ಆಗಿರುವ ಕಾರಣ ಸ್ಥಳದ ಸಮಸ್ಯೆ ಇದೆ ಎಂದು ಎಂಜಿನಿಯರ್ ಗಮನ ಸೆಳೆದರು.
ಶಾಸಕ ಅಂಗಾರ, ಇಲ್ಲಿ ಕಸ ತಂದು ರಾಶಿ ಹಾಕಬೇಡಿ. ಈ ಹಿಂದಿನ ಸ್ಥಳಕ್ಕೆ ಕೊಂಡು ಹೋಗಿ ಬೇರ್ಪಡಿಸಲು ಕ್ರಮ ಕೈಗೊಳ್ಳಿ. ಕಲ್ಲು ಕೋರೆ ಆಳ ಪ್ರದೇಶಗಳಿದ್ದರೆ ವಿಲೇ ಮಾಡಲು ಅನುಕೂಲ. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಕುಂಞಿ ಅಹ್ಮದ್, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಪುಷ್ಪಾವತಿ ಬಾಳಿಲ, ನ.ಪಂ. ಸದಸ್ಯರಾದ ಎಂ. ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ ಕೊಡಂಕೇರಿ, ಶರೀಪ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಟಿ.ಎಂ. ಶಹೀದ್ ಉಪಸ್ಥಿತರಿದ್ದರು.
ಕಾರು ಏರದೆ ನಡೆದೇ ಬಂದ ಸಚಿವ, ಶಾಸಕ!
ತಾ.ಪಂ.ನಲ್ಲಿ ಪ್ರಾಕೃತಿಕ ವಿಕೋಪ ಸಭೆ ಮುಗಿಸಿ ನ.ಪಂ. ತ್ಯಾಜ್ಯದ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಸಚಿವ ಯು.ಟಿ. ಖಾದರ್ ಅಲ್ಲಿಂದ 200 ಮೀಟರ್ ದೂರದಲ್ಲಿರುವ ನ.ಪಂ. ಆವರಣಕ್ಕೆ ಶಾಸಕ ಎಸ್. ಅಂಗಾರ ಅವರೊಂದಿಗೆ ರಸ್ತೆ ಮೂಲಕ ನಡೆದುಕೊಂಡೇ ಆಗಮಿಸಿ ವಸ್ತುಸ್ಥಿತಿ ಪರಿಶೀಲಿಸಿದರು.