ರಾಮನಗರ: ಒಂದೇ ಹುದ್ದೆಗೆ ಮುಖ್ಯಮಂತ್ರಿ ಅವರೇ ನಾಲ್ಕರಿಂದ ಐದು ಬಾರಿ ಆದೇಶ ಮಾಡಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ? ಒಂದು ಹುದ್ದೆಗೆ ಐದು ವ್ಯಕ್ತಿಗಳು ನಿಯುಕ್ತಿಗೊಳಿಸಿದ್ದಾರೆ. ಇದನ್ನು ಯಾರು ಆದೇಶ ಮಾಡಿದ್ದಾರೆ? ಕಾಂಗ್ರೆಸ್ ನಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ ನಲ್ಲಿ ವರ್ಗಾವಣೆ ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಎಂದು ಚನ್ನಪಟ್ಟಣದಲ್ಲಿ ಮೈಲನಾಯಕನಹೊಸಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದರು.
ಕಾಂಗ್ರೆಸ್ ನವರು ಹೊರನೋಟಕ್ಕೆ ನಾವು ಲಂಚ ತೆಗೆದುಕೊಳ್ಳಲ್ಲ ಎನ್ನುತ್ತಾರೆ. ನಾನು ಲಂಚ ಮುಟ್ಟಲ್ಲ, ನೀವು ಮುಟ್ಟಬೇಡಿ ಎಂದು ವೀರಾವೇಶದಲ್ಲಿ ಹೇಳುತ್ತಾರೆ. ಆದರೆ ಬೆಳಿಗ್ಗೆ ಎದ್ದರೆ ಕಾಂಗ್ರೆಸ್ ನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೆಸರೇಳದೆ ಎಚ್ ಡಿಕೆ ಟಾಂಗ್ ನೀಡಿದರು.
ಕಾಂಗ್ರೆಸ್ ನವರು ವರ್ಗಾವಣೆ ಬಿಟ್ಟರೆ ಬೇರೇನೂ ಕೆಲಸ ಮಾಡುತ್ತಿಲ್ಲ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳನ್ನು ಬಿಜೆಪಿಗಿಂತ ಕೆಟ್ಟ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಅಧಿಕಾರ ಬಂದಾಗ ತಲೆತಿರುಗದೆ ಗೌರವಯುತವಾಗಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಮೊದಲ ಸಾರ್ವಜನಿಕವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಕಲಿಯಬೇಕು. ಸ್ಪೀಕರ್ ಹೊಸ ಶಾಸಕರಿಗೆ ಮೂರು ದಿನ ಪಾಠ ಮಾಡಿದರು. ಅದರ ಬದಲು ಮಂತ್ರಿಗಳು ಯಾವ ರೀತಿ ಇರಬೇಕೆಂದು ಪಾಠ ಮಾಡಬೇಕು ಎಂದು ಟೀಕೆ ಮಾಡಿದರು.
ಪರಿಶುದ್ಧ ಆಡಳಿತವೆಂಬ ಭ್ರಮೆ: ಕಾಂಗ್ರೆಸ್ ನಲ್ಲೂ ಈಗ ಪರ್ಸೆಂಟೇಜ್ ಶುರುವಾಗುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲಾ ಕೆಲಸ ನಿಲ್ಲಿಸಿದ್ದಾರೆ. ಕಳೆದ 4 ವರ್ಷದ ಬೆಂಗಳೂರು ಅಭಿವೃದ್ಧಿ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಒಬ್ಬ ಮಂತ್ರಿ ಹೇಳುತ್ತಾರೆ. ಇದು ನಗೆಪಾಟಲಿನ ವಿಚಾರ. ನಾಲ್ಕು ವರ್ಷದ ಅಭಿವೃದ್ಧಿ ಕಾರ್ಯಗಳ ತನಿಖೆ ಯಾವ ರೀತಿ, ಎಲ್ಲಿಂದ ಮಾಡಲು ಸಾಧ್ಯ. ಇವತ್ತು ಬೆಳಿಗ್ಗೆಯಾದರೆ ಯಾವ ಮಂತ್ರಿ ನೋಡಿದರೂ ತನಿಖೆ ಎನ್ನುತ್ತಾರೆ. ಇದು ಐದು ಗ್ಯಾರಂಟಿಗಳ ಜೊತೆಗೆ ತನಿಖಾ ಜ್ಯೋತಿ ಕೊಡಲು ಹೊರಟಿದ್ದಾರೆ. ಈ ಸರ್ಕಾರದ ಹೇಳಿಕೆ ನೋಡಿದ್ರೆ ಇದು 6ನೇ ಗ್ಯಾರಂಟಿ. ಹಿಂದಿನ ಸರ್ಕಾರದ ತನಿಖಾ ಜ್ಯೋತಿ ಅಂತ ಸೇರಿಸ್ಕೊಳ್ಳಿ. ಇವರ ಯಾವ ತನಿಖೆಗಳಿಗೂ ತಾರ್ಕಿಕ ಅಂತ್ಯ ಇಲ್ಲ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಹೊಸ ಹೊಸ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಪರಿಶುದ್ಧ ಆಡಳಿತ ತರುತ್ತೇವೆ ಎನ್ನುವುದು ಇವರ ಭ್ರಮೆ ಎಂದು ಎಚ್ ಡಿಕೆ ಹೇಳಿದರು.
ಎಲ್ಲರೂ ಒಂದೇ: ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಹಿಂದೆ ಸ್ವಾತಂತ್ರ್ಯ ಪೂರ್ವದ ರಾಜಮಹಾರಾಜರ ಕಾಲದಲ್ಲಿ ಗುಲಾಮಗಿರಿ ಇತ್ತು. ಮೊಘಲರು ಬಂದಾಗ ಒಂದು ರೀತಿಯ ಗುಲಾಮಗಿರಿ ಇತ್ತು. ಈಸ್ಟ್ ಇಂಡಿಯಾ ಕಂಪನಿಯವರು ವ್ಯಾಪಾರ ಮಾಡಲು ಬಂದು ದೇಶ ಲೂಟಿ ಮಾಡಿ ಹೋದರು. ಈಗಿನ ರಾಷ್ಟ್ರೀಯ ಪಕ್ಷಗಳು ಕೂಡಾ ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿ. ಇದು ನಮ್ಮ ದೇಶದ ಸಂಸ್ಕೃತಿ. ನಮ್ಮದು ಸಂಪದ್ಭರಿತವಾದ ದೇಶ, ಎಷ್ಟು ಲೂಟಿ ಮಾಡಿದ್ರು ಸಂಪತ್ತು ಕರಗಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಎಚ್ ಡಿಕೆ ಕಿಡಿಕಾರಿದರು.
ಬೆಲೆ ಏರಿಕೆ ಕೇಂದ್ರದ್ದಲ್ಲ: ರಾಜ್ಯದಲ್ಲಿ ಬೆಲೆ ಏರಿಕೆ ಅಬ್ಬರ ವಿಚಾರವಾಗಿ ಮಾತನಾಡಿದ ಎಚ್ ಡಿಕೆ, ಇದನ್ನು ಕೇಂದ್ರ ಸರ್ಕಾರ ಮಾಡಿರುವುದಲ್ಲ. ಇವರು ಈಗ ಕೇಂದ್ರದ ಕಡೆಗೆ ಕೈ ತೋರಿಸುತ್ತಿದ್ದಾರೆ. ಅವರನ್ನು ಹೊಣೆ ಮಾಡಿದರೆ ಇವರು ಇರುವುದ್ಯಾಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದರು.
ಚುನಾವಣೆ ಪೂರ್ವದಲ್ಲಿ ಇಬ್ಬರೂ ಪೋಟೊ ಹಾಕಿ ಜಾಹಿರಾತು ಕೊಟ್ಟಿದ್ದರಲ್ವೇ. ಬೆಲೆ ಏರಿಕೆ ಇಳಿಸುತ್ತೇವೆ ಎಂದು ತಾನೆ ವೋಟ್ ಕೇಳಿದ್ದು. ಈಗ ಕೇಂದ್ರದ ಕಡೆ ಕೈ ತೋರಿಸಿದರೆ ನೀವೇನು ಮಾಡುತ್ತೀರಿ. ಹಾಗಿದ್ದರೆ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲವೇ ಎಂದು ಪ್ರಶ್ನಿಸಿದರು.