Advertisement

ಶಿಕ್ಷಕರ ವರ್ಗಾವಣೆ: ಗ್ರಾಮಾಂತರ ಶಾಲೆಗಳಿಗೆ ಸಂಕಟ

02:07 AM Dec 23, 2021 | Team Udayavani |

ಕುಂದಾಪುರ: ಸರಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ತೀರಾ ಗ್ರಾಮಾಂತರ ಭಾಗದ ಶಾಲೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ದುರ್ಗಮ ಹಾದಿಯ, ಹಳ್ಳಿಗಾಡಿನ, ಬಸ್‌ ವ್ಯವಸ್ಥೆಯಿಲ್ಲದ ಶಾಲೆಗಳಲ್ಲಿ ಇಷ್ಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ಈಗ ವರ್ಗಾವಣೆ ಬಯಸಿದ್ದು, ಕೆಲವು ಏಕೋಪಾಧ್ಯಾಯ ಶಾಲೆಗಳಲ್ಲಿ ಶಿಕ್ಷಕರೇ (ಶೂನ್ಯ ಶಾಲೆ) ಇಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ.

ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ, ಉಡುಪಿ ಹಾಗೂ ಕಾರ್ಕಳ ಈ ಐದು ವಲಯಗಳ ಶಾಲೆಗಳಲ್ಲಿಯೂ ಈ ಸಮಸ್ಯೆ ದಟ್ಟವಾಗಿದೆ. ಕುಂದಾಪುರ, ಬೈಂದೂರು ತಾಲೂಕುಗಳಲ್ಲೇ ಈ ಸಮಸ್ಯೆ ಹೆಚ್ಚು.

70 ಸಾವಿರಕ್ಕೂ ಅಧಿಕ ಅರ್ಜಿ
ರಾಜ್ಯಾದ್ಯಂತ ವರ್ಗಾವಣೆ ಪ್ರಕ್ರಿಯೆ ಅ. 25ರಿಂದ ನಡೆಯುತ್ತಿದ್ದು, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ತತ್ಸಮಾನ ಹುದ್ದೆಗಳ ವರ್ಗಾವಣೆ 2022ರ ಫೆ. 26ರ ವರೆಗೂ ನಡೆಯಲಿದೆ. ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದು, ತಾಂತ್ರಿಕ ಕಾರಣದಿಂದ ಅರ್ಜಿ ತಿರಸ್ಕೃತವಾಗಿದ್ದರೆ ಮತ್ತೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. 2019-20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ ಪಡೆದವರಿಗೆ ಆದ್ಯತೆ ಮೇಲೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ತಾಲೂಕು, ಜಿಲ್ಲೆಗೆ ವಾಪಸು ವರ್ಗಾವಣೆಯಾಗಲು ಆದ್ಯತೆ ನೆಲೆಯಲ್ಲಿ ಅವಕಾಶ ನೀಡಲಾಗಿದೆ.

ಎಲ್ಲೆಲ್ಲಿ ಖಾಲಿ
ಬೈಂದೂರಲ್ಲಿ ಗರಿಷ್ಠ 15, ಕುಂದಾಪುರದ 9 ಶಾಲೆಗಳಲ್ಲಿ ಶೂನ್ಯ ಶಿಕ್ಷಕರಿರುವ ಶಾಲೆಗಳಿದ್ದು, ಸದ್ಯ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು ಹಾಗೂ ಬೇರೆ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸಲಾಗಿದೆ. ಬೈಂದೂರಿನ ಹಳ್ಳಿಬೇರು, ಬಸ್ರಿಬೇರು, ಬೆಳ್ಳಾಲ, ಆತ್ರಾಡಿ, ಹಾಲಾಡಿ-ಕೆರಾಡಿ, ಬಾಳಿಕೆರೆ, ಹಡವು, ಕೊಡ್ಲಾಡಿ, ಶಾಡಬೇರು, ಕೆರಾಡಿ, ಕುಂದಾಪುರದ ಬಂಟಕೊಡ್ಲು, ಮರಾತೂರು, ಬೊಳ್ಮನೆ, ಕೆಲಾ, ಹೊಸಮಠ, ಬಸ್ರೂರು ಉರ್ದು, ಕೊರ್ಗಿ, ಬೆಚ್ಚಳ್ಳಿ, ಬ್ರಹ್ಮಾವರದ ನಂಚಾರು, ಕಾರ್ಕಳದ 6, ಉಡುಪಿಯ 1 ಶಾಲೆಯಲ್ಲಿ ಶೂನ್ಯ ಶಿಕ್ಷಕರಿದ್ದಾರೆ.

Advertisement

ಇದನ್ನೂ ಓದಿ:“ಪ್ರಳಯ್‌’ ಪರೀಕ್ಷೆ ಯಶಸ್ವಿ : ಪಯಣದ ಮಧ್ಯೆಯೇ ಪಥ ಬದಲಿಸುವ ಹೊಸ ತಲೆಮಾರಿನ ಕ್ಷಿಪಣಿ

ಸಮಸ್ಯೆಯೇನು?
ಕುಂದಾಪುರ, ಬೈಂದೂರಿನ ಬಹುತೇಕ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಈವರೆಗೆ ಇದ್ದ ಒಬ್ಬೊಬ್ಬ ಶಿಕ್ಷಕರು ವರ್ಗಾವಣೆಯಾಗುತ್ತಿದ್ದು, ಅಲ್ಲಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆದರೆ ತಾಲೂಕು ಕೇಂದ್ರ ಅಥವಾ ಮುಖ್ಯ ಪಟ್ಟಣದಿಂದ ತುಂಬಾ ದೂರ ಇರುವ, ಬಸ್‌ ಸಂಪರ್ಕವೂ ಇಲ್ಲದ ಊರುಗಳಲ್ಲಿರುವ ಈ ಶಾಲೆಗಳಿಗೆ ಶಿಕ್ಷಕರಾಗಿ ಬರಲು ಯಾರೂ ಒಪುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಶಾಲೆಗಳಿಗೆ ಖಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕಷ್ಟವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ 16 ಕಿ.ಪ್ರಾ. ಹಾಗೂ 6 ಹಿ.ಪ್ರಾ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. 748 ಅತಿಥಿ ಶಿಕ್ಷಕರನ್ನು ಹೊಸದಾಗಿ ನಿಯೋಜಿಸಲಾಗಿದೆ. ಸದ್ಯಕ್ಕೆ ಎಲ್ಲಿಯೂ ಸಮಸ್ಯೆಯಾಗದ ರೀತಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೇರೆ ಜಿಲ್ಲೆಗಳಿಂದ ವರ್ಗಗೊಂಡು ಬರುವಂತಹ ಶಿಕ್ಷಕರನ್ನು ನಿಯೋಜಿಸಲಾಗುವುದು. ಫೆಬ್ರವರಿ ವರೆಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ.
– ಎನ್‌.ಎಚ್‌. ನಾಗೂರ,
ಉಪ ನಿರ್ದೇಶಕ, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next