Advertisement
ಟ್ರಾನ್ಸ್‌ಫರ್ ಆಗಿ ಬಂದ ಹಿರಿಯ ಅಧಿಕಾರಿಯೊಬ್ಬರು, ತಮ್ಮ ಲಗ್ಗೇಜನ್ನು ತೆರೆದು ವಿಂಗಡಿಸಲಿಲ್ಲ, ಮನೆಯನ್ನೂ ವ್ಯವಸ್ಥೆಗೊಳಿಸಿರಲಿಲ್ಲ. ಇದನ್ನು ಗಮನಿಸಿದ ಸಹೋದ್ಯೋಗಿ ಯೊಬ್ಬರು, “ಅವರು ಬಹುಶಃ ಇನ್ನೊಂದು ಎತ್ತಂಗಡಿಯ ನಿರೀಕ್ಷೆಯಲ್ಲಿ ಇರಬಹುದು’ ಎಂದು ಚಟಾಕಿ ಹಾರಿಸಿದ್ದರಂತೆ. ಈ ದಿನಗಳಲ್ಲಿ ಪ್ರತಿದಿನವೂ ಉನ್ನತಾಧಿಕಾರಿಗಳ ಟ್ರಾನ್ಸ್‌ಫರ್ ಆಗುತ್ತಿದ್ದು ಮತ್ತು ಇಂಥ ಹಲವು ಆದೇಶಗಳು ದಿನ ಬೆಳಗಾಗುವುದರೊಳಗೆ ಮಾರ್ಪಾಡಾಗುತ್ತಿರುವುದನ್ನು ಗಮನಿಸಿ ದಾಗ ಈ ಹಾಸ್ಯ ಚಟಾಕಿಯಲ್ಲಿ ಅರ್ಥ ಕಾಣುತ್ತದೆ.
Related Articles
Advertisement
ಒಬ್ಬ ಅಧಿಕಾರಿಗೆ ತನ್ನ ಕಾರ್ಯಕ್ಷಮತೆಯನ್ನು ನಿರೂಪಿಸಲು ಸ್ವಲ್ಪ ಕಾಲಾವಕಾಶದ ಅವಶ್ಯಕತೆ ಇರುತ್ತದೆ. ಯಾರು, ಏನು, ಎತ್ತ ಎನ್ನುವುದನ್ನು ತಿಳಿಯುವ, ಹೊಸ ಸ್ಥಳದಲ್ಲಿ ಇನ್ನೂ ಸರಿಯಾಗಿ ಸೆಟ್ಲ ಆಗುವ ಮೊದಲೇ ಎತ್ತಂಗಡಿ ಮಾಡಿದರೆ ಹೇಗೆ? ಯಾರು ಎಲ್ಲಿ ಕಾರ್ಯನಿರ್ವಹಿಸಬೇಕು, ಎಷ್ಟು ದಿನ ನಿರ್ವಹಿಸಬೇಕು ಎನ್ನುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ಆಡಳಿತಕ್ಕೆ ಚುರುಕು ಮುಟ್ಟಿಸಲು, ದಕ್ಷತೆ ಹೆಚ್ಚಿಸಲು, ಜನಸ್ನೇಹಿ ಅಧಿಕಾರಿಯನ್ನು ಕೊಡಮಾಡಲು, ಸರಿಯಾದ ಸ್ಥಳಕ್ಕೆ ಸರಿಯಾದ ಅಧಿಕಾರಿಯನ್ನು ನೇಮಿಸಲು ಇಂಥ ವರ್ಗಾವರ್ಗಿ ಅನಿವಾರ್ಯ ಎಂದು ಸಮಜಾಯಿಷಿ ಕೊಡಲಾಗುತ್ತದೆ. ಅಧಿಕಾರಿಗಳು ಸರ್ಕಾರ ನಿಯೋಜಿಸಿದ ಸ್ಥಳಕ್ಕೆ ಮತ್ತು ಹು¨ªೆಗೆ ಹೋಗಲೇಬೇಕು ಮತ್ತು ಅದು ಒಂಬತ್ತು ದಿನಗಳಿಗೆ ಆಗಿರಬಹುದು ಅಥವಾ ಒಂಬತ್ತು ತಿಂಗಳಿಗೂ ಆಗಿರಬಹುದು ಎನ್ನುವ ಚಿಂತನೆ ಕೆಲವು ರಾಜಕಾರಣಿಗಳಲ್ಲಿ ಇದೆ.
ಅಧಿಕಾರಿಗಳ ಸೇವಾ ನಿಯಮಗಳಲ್ಲಿ ಸೇವೆಯ ಅಗತ್ಯತೆ (exigency of service) ಎನ್ನುವ ನಿಬಂಧನೆ ಇದ್ದು ಮತ್ತು ಇಂಥ ಸನ್ನಿವೇಶಗಳಲ್ಲಿ ಸರ್ಕಾರ ಹೇಳುವ, ಈ ಸ್ಥಳಕ್ಕೆ ಇವರೇ ಅರ್ಹರು ಅಥವಾ ಅನರ್ಹರು ಎನ್ನುವ ಸಮರ್ಥನೆಯನ್ನು ವಿರೋಧಿಸುವುದು ಕಷ್ಟ. ಈ ಪರಮಾಧಿಕಾರವನ್ನು ಸರ್ಕಾರವು ತನಗಿಷ್ಟ ಬಂದಂತೆ, ಕೆಲವು ಹಿತಾಸಕ್ತಿಗಳನ್ನು ತೃಪ್ತಿಪಡಿಸಲು ಬಳಸಬಹುದೇ ಎನ್ನುವುದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರಿಗಳು ಇಂದು ವಿವಿಧ ರೀತಿಯ ಒತ್ತಡದಲ್ಲಿ ಕೆಲಸಮಾಡುತ್ತಿದ್ದು, ಅವರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಜನಪ್ರತಿನಿಧಿಗಳ ಮತ್ತು ರಾಜಕಾರಣಿಗಳ ವಿಶ್ವಾಸ ದಲ್ಲಿ ಇರಲೇಬೇಕಾಗುತ್ತದೆ. ಅವರು ಕಿಂಚಿತ್ ಸ್ವಂತಿಕೆಯನ್ನು ತೋರಿಸಿದರೆ ದಂಡ ತೆರಲೇಬೇಕು. ಈ ನಿಟ್ಟಿನಲ್ಲಿ ಅವರ ತಲೆಯ ಮೇಲೆ ತೂಗುಗತ್ತಿ ಯಾವಾಗಲೂ ಇರುತ್ತದೆ. ವಿವಾದಾತ್ಮಕ ಎತ್ತಂಗಡಿಗಳ ಇತಿಹಾಸದ ಪುಟವನ್ನು ತೆರೆದರೆ ಈ ನಿಟ್ಟಿನಲ್ಲಿ ಸಾಕಷ್ಟು ಉದ್ದದ ಪಟ್ಟಿ ದೊರೆಯತ್ತದೆ. ದಕ್ಷ, ಪ್ರಾಮಾಣಿಕ, ಖಡಕ್, ನಿಷ್ಠುರ, ಜನಸಾಮಾನ್ಯರ ಹೀರೋ ಎಂದು ಬಣ್ಣಿಸಲ್ಪಟ್ಟ ಹರ್ಯಾಣದ ಐ.ಎ.ಎಸ್ ಅಧಿಕಾರಿಯೊಬ್ಬರಿಗೆ ಅವರ ಮೂರು ದಶಕಗಳ ಕಾಲದ ಸೇವೆಯಲ್ಲಿ 51 ಬಾರಿ ಎತ್ತಂಗಡಿಯಾಗಿದೆ. ಕೆಲವು ಹುದ್ದೆಗಳಲ್ಲಿ ಕೇವಲ 4-5 ದಿನಗಳಷ್ಟು ಮಾತ್ರ ಕೆಲಸ ನಿರ್ವಹಿಸಿದ್ದರಂತೆ. ಕರ್ನಾಟಕದಲ್ಲಿ ಒಬ್ಬ ಕೆ.ಎ.ಎಸ್ ಅಧಿಕಾರಿಗೆ 9 ವರ್ಷಗಳ ಸೇವೆಯಲ್ಲಿ 29 ಬಾರಿ ವರ್ಗವಾಗಿತ್ತು. ಉನ್ನತ ಅಧಿಕಾರಿ ಒಬ್ಬರು ನಿರಂತರ ವರ್ಗಾವಣೆಗೆ ಬೇಸತ್ತು ದೀರ್ಘಕಾಲದ ರಜೆಮೇಲೆ ಹೋಗಿದ್ದರು. ಈ ರೀತಿ ವರ್ಗಾವರ್ಗಿಯಾದರೆ, ಆ ಅಧಿಕಾರಿಗಳು ಕಾರ್ಯ ನಿರ್ವಹಿಸುವುದಾದರೂ ಹೇಗೆ? ಅವರು ತಮ್ಮ ಸಾಮರ್ಥ್ಯವನ್ನು ತೋರಿಸುವುದಾದರೂ ಹೇಗೆ?
ದೇಶ, ರಾಜ್ಯ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದಿರಲು, ಅಧಿಕಾರಿಗಳ ನಿರಂತರ ವರ್ಗಾವಣೆಯೂ ಕಾರಣ ಎನ್ನುವ ಅಭಿಪ್ರಾಯದಲ್ಲಿ ಅರ್ಥವಿದೆ. ಒಬ್ಬ ಅಧಿಕಾರಿ ಒಂದು ಯೋಜನೆಯನ್ನು ನಿರೂಪಿಸಿ ಕಾರ್ಯಗತಗೊಳಿಸಲು ಕನಿಷ್ಠ ಎರಡು ವರ್ಷಗಳಾದರೂ ಬೇಕು. ಈ ಮಧ್ಯದಲ್ಲಿ ಅವರನ್ನು ವರ್ಗ ಮಾಡಿದರೆ, ಆ ಯೋಜನೆ ಅನಾಥವಾಗಿ ಹಳ್ಳಹಿಡಿಯುವುದು ಗ್ಯಾರಂಟಿ. ಹಾಗೆಯೇ ಇಂಥ ವರ್ಗಾವರ್ಗಿಗಳಿಗಾಗಿ ತೆರಿಗೆದಾರನ ಹಣ ಅನುತ್ಪಾದಕ ಉದ್ದೇಶಗಳಿಗೆ ಬಳಕೆಯಾಗುವುದು ಇನ್ನೊಂದು ಮಹಾ ಅರ್ಥಿಕ ದುರಂತ. ಇಂಥ ವರ್ಗಾವರ್ಗಿಗಳು ಅಡಳಿತ ಯಂತ್ರದ ವೇಗವನ್ನು ಕುಂಠಿತಗೊಳಿಸುವುದರೊಂದಿಗೆ, ಸಂಬಂಧಪಟ್ಟ ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಂದಿಸುತ್ತದೆ ಮತ್ತು ಅವರ ವೈಯಕ್ತಿಕ ಬದುಕನ್ನು ಹೈರಾಣಾಗಿಸಿ ಕಂಗೆಡಿಸುತ್ತದೆ. ವೈಯಕ್ತಿಕ ಮತ್ತು ಕೌಟುಂಬಿಕ ಬದುಕು ಡಿಸ್ಟರ್ಬ್ ಆದರೆ ಕಚೇರಿ ಬದುಕೂ ಅದೇ ಹಾದಿ ಹಿಡಿಯುತ್ತದೆ ಎನ್ನುವುದಕ್ಕೆ ಇತಿಹಾಸ ಇದೆ. ಈ ಟ್ರೆಂಡ್ ಹೀಗೆಯೇ ಮುಂದುವರಿದರೆ, ಅವರು ತಿಂಗಳ ಕೊನೆಯ ಸಂಬಳಕ್ಕಾಗಿ ಕೆಲಸ ಎನ್ನುವ ಮನಸ್ಥಿತಿಗೆ ಶರಣಾಗಿ, ಸಾಮಾನ್ಯ ದರ್ಜೆಯ ನೌಕರನ ಚಿಂತನೆಯತ್ತ ಬಾಗುತ್ತಾರೆ. ತೀರಾ ಇತ್ತೀಚಿನವರೆಗೆ ಬ್ಯಾಂಕುಗಳಲ್ಲಿ ಚೇರ್‌ಮನ್ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್‌ಗಳು ಹುದ್ದೆಗೆ ಸೇರಿದ ಒಂದೆರಡು ವರ್ಷಗಳಲ್ಲಿ ನಿವೃತ್ತರಾಗುತ್ತಿದ್ದು, ತಮ್ಮ ಸಾಧನೆಯನ್ನು ತೋರಿಸಲು ಮತ್ತು ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು, ಈ ಅವಧಿ ಸಾಲದೆಂದು ಅವರುಗಳು ಸರ್ಕಾರದ ಮೊರೆಹೋಗಲು, ಈ ಹುದ್ದೆಗಳಿಗೆ ಸೇರುವವರು ಕನಿಷ್ಠ 3-5 ವರ್ಷಗಳ ಕಾಲ ಸೇವೆಯಲ್ಲಿ ಇರುವಂತೆ ನಿಯಮಾವಳಿಯನ್ನು ಬದಲಾಗಿಸಿದೆಯಂತೆ. ಇದೇ ಮಾನದಂಡವನ್ನು ಸರ್ಕಾರದ ಹಿರಿಯ ಅಧಿಕಾರಿಗಳಿಗೂ ಅನ್ವಯಿಸಿ ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗದಂತೆ ಮತ್ತು ಅಡಳಿತಯಂತ್ರ ಸುಗಮವಾಗಿ, ಸರಾಗವಾಗಿ ನಡೆಯುವಂತೆ ಏಕೆ ಮಾಡಬಾರದು? ಹಾಗೆಯೇ ಈ ವರ್ಗಾವಣೆಗಳನ್ನು ವರ್ಷದ ಒಂದು ನಿರ್ದಿಷ್ಟ ತಿಂಗಳಿಗೆ ಸೀಮಿತಗೊಳಿಸಿ ಜನಸಾಮಾನ್ಯರನ್ನು “”ಸಾಹೇಬರಿಗೆ ವರ್ಗವಾಗಿದೆ…ಹೊಸ ಸಾಹೇಬರು ಇನ್ನೂ ಬರಬೇಕು. ಅಲ್ಲಿಯವರೆಗೂ ನಿಮ್ಮ ಕೆಲಸ ಆಗಲ್ಲ” ಎನ್ನುವ ಅನನುಕೂಲದಿಂದ ತಪ್ಪಿಸಬಾರದೇಕೆ?
– ರಮಾನಂದ ಶರ್ಮಾ