ಬೆಂಗಳೂರು: ಕೆ.ಆರ್.ಮಾರುಕಟ್ಟೆ ವಾರ್ಡ್‌ನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ನಾಲ್ವರು ಪೌರಕಾರ್ಮಿಕರನ್ನು ಕೆ.ಆರ್.ಮಾರುಕಟ್ಟೆ ಕಾಂಪ್ಲೆಕ್ಸ್ ಮಸ್ಟರಿಂಗ್ ಕೇಂದ್ರದಿಂದ ಅದೇ ವಾರ್ಡ್‌ನ ಕರೀಕಲ್ಲು ಆಂಜನೇಯಸ್ವಾಮಿ ದೇವಸ್ಥಾನದ ಮಸ್ಟರಿಂಗ್ ಕೇಂದ್ರಕ್ಕೆ ವರ್ಗಾಹಿಸುವಂತೆ ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ.
ಕೆಲಸ ಮಾಡದೆ ವೇತನ ಪಡೆಯುತ್ತಿರುವ ನಾಲ್ವರು ಪೌರಕಾರ್ಮಿಕರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಾರುಕಟ್ಟೆ ಕಾಂಪ್ಲೆಕ್ಸ್ ಮಸ್ಟರಿಂಗ್ ಕೇಂದ್ರದಲ್ಲಿ ಕೆಲಸ ಮಾಡುವ 120 ಪೌರಕಾರ್ಮಿಕರು ಶುಕ್ರವಾರ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರ ಮಹಾಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮಾರುಕಟ್ಟೆ ಕಾಂಪ್ಲೆಕ್ಸ್ ಮಸ್ಟರಿಂಗ್ ಕೇಂದ್ರದಲ್ಲಿ 124 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ನಾಗಲಕ್ಷ್ಮೀ, ಡಿ.ರತ್ನಮ್ಮ, ಚಾಮುಂಡಿ ಹಾಗೂ ಓಬಳಮ್ಮ ಎಂಬವರು ಕೆಲಸ ಮಾಡದೆ ವೇತನ ಪಡೆಯುತ್ತಿದ್ದಾರೆ. ಕೆಲಸ ಮಾಡದಿರುವ ಬಗ್ಗೆ ಪ್ರಶ್ನಿಸಿದರೆ, ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಹೀಗಾಗಿ ಅವರನ್ನು ಬೇರೆಡೆ ವರ್ಗಾಹಿಸಬೇಕು ಎಂದು ಒತ್ತಾಯಿಸಿದರು.
ಇದರೊಂದಿಗೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ಸುಬ್ರಮಣಿ ಎಂಬುವರಿಗೆ 60 ವರ್ಷವಾಗಿದ್ದು, ಅವರನ್ನು ಕೆಲಸದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.
ಪೌರಕಾರ್ಮಿಕರ ಪ್ರತಿಭಟನೆಗೆ ಸ್ಪಂದಿಸಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಆರೋಪ ಕೇಳಿಬಂದ ನಾಲ್ಕು ಮಂದಿ ಪೌರಕಾರ್ಮಿಕರು ಕೂಡಲೇ ವರ್ಗಾವಣೆ ಮಾಡಿರುವ ಸ್ಥಳಕ್ಕೆ ತೆರಳುವಂತೆ ಆದೇಶಿಸಿದ್ದಾರೆ. ಜತೆಗೆ 60 ವರ್ಷ ಪೂರೈಸಿದ ಸುಬ್ರಮಣಿಯನ್ನು ಕೆಲಸದಿಂದ ತೆಗೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.