ಬೆಂಗಳೂರು: ಇದೇ 9 ರಂದು ಕೊನೆಗೊಳ್ಳಬೇಕಿದ್ದ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜು.15 ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅದೇ ರೀತಿ ಆರೋಗ್ಯ ಇಲಾಖೆ ಹಾಗೂ ಆಯುಷ್ ಇಲಾಖೆಯ ವರ್ಗಾವಣೆ ಪ್ರಕ್ರಿಯೆಗೆ ಆಗಸ್ಟ್ 31 ರವರೆಗೆ ಕಾಲಾವಕಾಶ ನೀಡಿದೆ.
ಸಾರ್ವತ್ರಿಕ ವರ್ಗಾವಣೆಗೆ ನೀಡಿದ್ದ ಅವಧಿ ಅತ್ಯಂತ ಕಡಿಮೆಯಾಗಿದ್ದು, ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರಿ ನೌಕರರು ಮನವಿ ಮಾಡಿದ್ದರು. ಇದನ್ನು ಮನಗಂಡ ಸರ್ಕಾರ, ಅವಧಿ ವಿಸ್ತರಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಹಿಂದೆ ಇದ್ದ ಷರತ್ತುಗಳಿಗೆ ಒಳಪಟ್ಟು ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಆದೇಶ ಹೊರಡಿಸಿದ್ದು, ಆಯಾ ಇಲಾಖಾ ಸಚಿವರಿಗೆ ನೀಡಿದ್ದ ವರ್ಗಾವಣೆ ಅಧಿಕಾರವೂ ಜು.15 ರವರೆಗೆ ವಿಸ್ತರಣೆಯಾದಂತಾಗಿದೆ. ಅದೇ ರೀತಿ ಜು.30 ಕ್ಕೆ ಕೊನೆಗೊಳ್ಳಬೇಕಿದ್ದ ಆರೋಗ್ಯ ಹಾಗೂ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಮತ್ತಿತರ ವೃಂದದ ಸಿಬ್ಬಂದಿ ವರ್ಗಾವಣೆಯ ಅವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿ ಆಯಾ ಇಲಾಖೆಗಳು ಆದೇಶಿಸಿದ್ದು, ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ ಪ್ರಕ್ರಿಯೆ ಮುಂದುವರಿಯಲಿದೆ.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ವೆಂಕಟೇಶ್ ಅವರ ಆದೇಶದ ಮೇರೆಗೆ ಐವರು ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, 14 ದ್ವಿತೀಯದರ್ಜೆ ಸಹಾಯಕರು, 16 ಜಾನುವಾರು ಅಭಿವೃದ್ಧಿ ಅಧಿಕಾರಿ, 13 ಜಾನುವಾರು ಅಧಿಕಾರಿ, 55 ಹಿರಿಯ ವೈದ್ಯಕೀಯ ಪರೀಕ್ಷಕರು, 52 ವೈದ್ಯಕೀಯ ಪರೀಕ್ಷಕರು, 90 ಮಂದಿ ಕಿರಿಯ ವೈದ್ಯಕೀಯ ಪರೀಕ್ಷಕ, ಓರ್ವ ವಾಹನ ಚಾಲಕ, 27 ಜನ ಡಿ ದರ್ಜೆ ನೌಕರರನ್ನು ವರ್ಗಾವಣೆ ಮಾಡಲಾಗಿದೆ.
ಅಂತೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿದ್ದ ಅಡುಗೆಯವರು ಮತ್ತು ಸಹಾಯಕ ಅಡುಗೆಯವರನ್ನು ಸಚಿವ ಶಿವರಾಜ್ ತಂಗಡಗಿ ಆದೇಶ ಮೇರೆಗೆ ವರ್ಗಾಯಿಸಿದೆ.