Advertisement

ಬೊಮ್ಮಯ್ಯ ದೇವಸ್ಥಾನ ಆಡಳಿತ ಹಸ್ತಾಂತರ

12:18 PM May 29, 2022 | Team Udayavani |

ಅಂಕೋಲಾ: ತಾಲೂಕಿನ ತೆಂಕಣಕೇರಿ ಬೊಮ್ಮಯ್ಯ ದೇವರ ದೇವಸ್ಥಾನದ ಆಡಳಿತ ಹಸ್ತಾಂತರ ವಿಚಾರವಾಗಿ ಎದ್ದಿದ್ದ ವಿವಾದ ಸುಖಾಂತ್ಯ ಕಂಡಿದೆ.

Advertisement

ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ್‌ ಪರವಾಗಿ ಶಿರಸ್ತೇದಾರ ಗಿರೀಶ ಜಾಂಬಾವಳಿಕರ ಮಧ್ಯಸ್ಥಿಕೆಯಲ್ಲಿ ದೇವಸ್ಥಾನದ ಮೊಕ್ತೇಸರಾಗಿದ್ದ ಜಿ.ಸಿ. ನಾಯ್ಕ ದೇವಸ್ಥಾನದ ಆಡಳಿತವನ್ನು ನೂತನ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

ತೆಂಕಣಕೇರಿ ಬೊಮ್ಮಯ್ಯ ದೇವರ ದೇವಸ್ಥಾನ ನೂರಾರು ವರ್ಷದ ಇತಿಹಾಸ ಹೊಂದಿದ್ದು, ಆವಾರದಲ್ಲಿ ಮಾಸ್ತಿ, ಹಿರೇಹೊನ್ನಪ್ಪ, ಬಂಡೀನಾಸ ಮುಂತಾದ ಪರಿವಾರ ದೇವರುಗಳೂ ಇವೆ. ದಿನಂಪ್ರತಿ ಪೂಜೆ ಪುರಸ್ಕಾರಗಳೊಂದಿಗೆ ಪ್ರತೀವರ್ಷ ಇಲ್ಲಿ ಬಂಡೀಹಬ್ಬವೂ ವಿಜೃಂಭಣೆಯಿಂದ ನಡೆಯುತ್ತದೆ.

ಹಲವು ವರ್ಷ ಬೀರಪ್ಪ ನಾಯ್ಕ ದೇವಸ್ಥಾನ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಪಟೇಲ ನಾಗಪ್ಪ ಎನ್ನುವವರು ಮೊಕ್ತೇಸರರಾಗಿ ಕಾರ್ಯ ನಿರ್ವಹಿಸಿದರು. ಅವರ ನಂತರ ಕಳೆದ 12 ವರ್ಷಗಳಿಂದ ಇಲ್ಲಿನ ಜಿ.ಸಿ. ನಾಯ್ಕ ದೇವಸ್ಥಾನದ ಆಡಳಿತ ಜವಾಬ್ದಾರಿ ನಿರ್ವಹಿಸುತ್ತ ಬಂದಿದ್ದರು. ಎಲ್ಲ ದೇವಸ್ಥಾನಗಳಿಗೆ ಸ್ಥಳೀಯ ಆಡಳಿತ ಮಂಡಳಿ ರಚನೆ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಬೊಮ್ಮಯ್ಯ ದೇವಸ್ಥಾನಕ್ಕೂ ಆಡಳಿತ ಮಂಡಳಿ ರಚಿಸಲಾಗಿತ್ತು.

ನಿಯಮದ ಪ್ರಕಾರ ನೂತನ ಆಡಳಿತ ಮಂಡಳಿಗೆ ದೇವಸ್ಥಾನದ ಆಡಳಿತವನ್ನು ಹಸ್ತಾಂತರಿಸಬೇಕಿತ್ತು. ಈ ಕುರಿತು ನೂತನ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ ನಾರಾಯಣ ನಾಯ್ಕ ಇವರು ಜಿ.ಸಿ. ನಾಯ್ಕರಿಗೆ ಹಲವು ಬಾರಿ ವಿನಂತಿಸಿದರೂ ಇದುವರೆಗೂ ಹಸ್ತಾಂತರಿಸಿರಲಿಲ್ಲ. ಏನಾದರೊಂದು ಕಾರಣ ನೀಡಿ ದಿನ ದೂಡುತ್ತಲೇ ಬಂದಿದ್ದರು. ಇದರಿಂದ ಆಕ್ರೋಶಗೊಂಡ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

Advertisement

ಜಿಲ್ಲಾಧಿಕಾರಿಗಳು ಆದೇಶ ನೀಡಿ ತಹಶೀಲ್ದಾರ್‌ ಸಮ್ಮುಖದಲ್ಲಿ ಆಡಳಿತ ಹಸ್ತಾಂತರಿಸುವಂತೆ ನೋಟಿಸ್‌ ಜಾರಿ ಮಾಡಿದ್ದರು. ಅದರಂತೆ ತಹಶೀಲ್ದಾರ್‌ ಪರವಾಗಿ ಶಿರಸ್ತೆದಾರ ಗಿರೀಶ ಜಾಂಬಾವಳಿಕರ ಆಡಳಿತ ಹಸ್ತಾಂತರ ಪ್ರಕ್ರಿಯೆ ನಡೆಸಿಕೊಟ್ಟರು.

ಜಿ.ಸಿ. ನಾಯ್ಕರಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಕೀಲಿಕೈಗಳನ್ನೂ, ದೇವರ 70 ಬಗೆಯ ಬೆಳ್ಳಿ, ಬಂಗಾರದ ಆಭರಣಗಳನ್ನೂ ನಗದು ಹಣವನ್ನೂ ಬ್ಯಾಂಕುಗಳಲ್ಲಿನ ಎಫ್‌.ಡಿ ಸರ್ಟಿಫಿಕೇಟ್‌ಗಳನ್ನೂ, ಕಾಗದ ಪತ್ರಗಳನ್ನೂ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ ನಾಯ್ಕರಿಗೆ ಹಸ್ತಾಂತರಿಸಿದರು.

ನೂತನ ಆಡಳಿತ ಮಂಡಳಿ ವತಿಯಿಂದ ಮೊಕ್ತೇಸರರಾಗಿ ದಶಕಗಳ ಕಾಲ ದೇವಸ್ಥಾನದ ಜವಾಬ್ದಾರಿ ನಿರ್ವಹಿಸಿದ ಜಿ.ಸಿ.ನಾಯ್ಕರನ್ನು ಸನ್ಮಾನಿಸಲಾಯಿತು. ಉಪ ತಹಶೀಲ್ದಾರ್‌(ಬೆಳಸೆ) ಎಸ್‌.ಪಿ. ಹರಿಕಾಂತ, ಕಂದಾಯ ಇಲಾಖೆಯ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ಲಲಿತಾ ಆಗೇರ, ಸಿಪಿಐ ಸಂತೋಷ ಶೆಟ್ಟಿ, ಪಿಎಸೈ ಮಾಲಿನಿ ಹಾಸಭಾವಿ ಹಾಗೂ ಪೊಲೀಸ್‌ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next