Advertisement

ಇನ್ನು ವಿಶೇಷ ಪೊಲೀಸ್‌ ಠಾಣೆಗೆ ಪರಿಶಿಷ್ಟರ ಮೇಲಿನ ಹಲ್ಲೆ, ದೌರ್ಜನ್ಯ ಕೇಸ್‌ ವರ್ಗಾವಣೆ!

10:57 PM Jun 20, 2024 | Team Udayavani |

ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) 33 ಘಟಕಗಳಿಗೆ ವಿಶೇಷ ಪೊಲೀಸ್‌ ಠಾಣೆ ಮಾನ್ಯತೆ ನೀಡಲು ತಾತ್ವಿಕ ಒಪ್ಪಿಗೆ ನೀಡಿರುವ ರಾಜ್ಯ ಸರಕಾರ, ಇದಕ್ಕಾಗಿ 450 ವಿವಿಧ ಹುದ್ದೆಗಳಿಗೆ ಮಂಜೂರಾತಿ ನೀಡುವ ಅಧಿಕಾರವನ್ನು ಉಪ ಸಮಿತಿಗೆ ನೀಡಿದೆ.

Advertisement

ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹಾಗೂ ಸಮಾಜ ಕಲ್ಯಾಣ ಸಚಿವ ಡಾ| ಎಚ್‌.ಸಿ. ಮಹದೇವಪ್ಪ ನೇತೃತ್ವದಲ್ಲಿ ಉಪಸಮಿತಿ ಇರಲಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಸಂಪುಟ ಸಭೆಯಲ್ಲಿ ಶಿಫಾರಸನ್ನು ಮಂಡಿಸಲಿದೆ.

ಗುರುವಾರ ಮುಖ್ಯಮಂತ್ರಿ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

48 ಗಂಟೆಯಲ್ಲಿ ಡಿಸಿಆರ್ ಠಾಣೆಗೆ ಕೇಸ್ ವರ್ಗ:

ಪರಿಶಿಷ್ಟ ಜಾತಿ ಜನಾಂಗದ ಮೇಲೆ ಹಲ್ಲೆ, ದೌರ್ಜನ್ಯದಂತಹ ಪ್ರಕರಣಗಳು ನಡೆದರೂ ಶೇ. 96 ಪ್ರಕರಣಗಳಲ್ಲಿ ಶಿಕ್ಷೆ ಆಗುತ್ತಿರಲಿಲ್ಲ. ಡಿಸಿಆರ್‌ಇಗೆ ಪೊಲೀಸ್‌ ಠಾಣೆ ಮಾನ್ಯತೆ ಇಲ್ಲದ್ದ

Advertisement

ರಿಂದ ಹಿನ್ನಡೆ ಆಗುತ್ತಿತ್ತು. ಇನ್ನು ಮುಂದೆ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ, ದೌರ್ಜನ್ಯ

ದಂತಹ ಪ್ರಕರಣಗಳು ಜರುಗಿದರೆ ಹತ್ತಿರದ ಯಾವುದೇ ಠಾಣೆಗೆ ದೂರು ಕೊಟ್ಟರೂ ಅದು ಜಿಲ್ಲಾ ಕೇಂದ್ರಗಳಲ್ಲಿರುವ ಡಿಸಿಆರ್‌ಇ ಠಾಣೆಗೆ 48 ಗಂಟೆಗಳಲ್ಲಿ ವರ್ಗಾವಣೆ ಆಗಲಿವೆ. ಬಳಿಕ ತನಿಖಾಧಿಕಾರಿಗಳು ತನಿಖೆ ಕೈಗೊಂಡು ಮುಂದಿನ ಪ್ರಕ್ರಿಯೆಗಳನ್ನು ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಅನ್ವಯ ಜರಗಿಸಲಿದೆ.

6 ವಿವಿಗಳ ಸುಧಾರಣೆಗೆ 279 ಕೋಟಿ:

ಪ್ರಧಾನಮಂತ್ರಿ ಉಚ್ಚತರ್‌ ಶಿಕ್ಷಾ ಅಭಿ ಯಾನ ಯೋಜನೆಯನ್ನು ಬೆಂಗಳೂರು ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ, ಮಂಗಳೂರು ವಿವಿ, ಕರ್ನಾಟಕ ವಿವಿ ಮತ್ತು ಕಲಬುರಗಿ ವಿವಿಗಳಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಕೇಂದ್ರ ಸರಕಾರದ 167.86 ಕೋಟಿ ರೂ.ಗಳ ಜತೆಗೆ ರಾಜ್ಯ ಸರಕಾರವೂ 111.91 ಕೋಟಿ ರೂ. ಸೇರಿಸಿ 279.77 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಗುಣಮಟ್ಟದ ಬೋಧನೆ, ಕಲಿಕೆಯ ಉತ್ಕೃಷ್ಟತೆ ಅಭಿವೃದ್ಧಿಪಡಿಸಿ ನ್ಯಾಕ್‌ ಸೇರಿದಂತೆ ಇನ್ನಿತರ ಮಾನ್ಯತೆ ಪಡೆಯಲು ಐಸಿಟಿ ಆಧಾರಿತ ಡಿಜಿಟಲ್‌ ಮೌಲಸೌಕರ್ಯ ಬಳಸಿಕೊಳ್ಳುವುದು, ಬಹುಶಿಸ್ತೀಯತೆ ಮೂಲಕ ಉದ್ಯೋಗಾರ್ಹತೆ ಹೆಚ್ಚಿಸುವ ಯೋಜನೆಗಳು ಇದರಡಿ ಬರಲಿವೆ.

ತೆರಿಗೆ ವಸೂಲಿಗೆ ಮನೆ ಬಾಗಿಲಿಗೆ ಬರಲಿವೆ ಮಹಿಳಾ ಸಂಘಗಳು!:

ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ, ನೀರಿನ ಶುಲ್ಕ ಬಾಕಿ ವಸೂಲಾತಿ ಹೊಣೆಯನ್ನು ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ವಸೂಲಾದ ಮೊತ್ತದ ಮೇಲೆ ಶೇ. 5ರಷ್ಟು ಪ್ರೋತ್ಸಾಹಧನ ನೀಡಲೂ ನಿರ್ಧರಿಸಿದೆ. ಸಿಬಂದಿ ಕೊರತೆ ಇರುವುದರಿಂದ ಈ ನಿರ್ಣಯ ಕೈಗೊಂಡಿರುವುದಾಗಿ ಒಪ್ಪಿಕೊಂಡಿದೆ. ಇಷ್ಟಾಗಿಯೂ ನಿರೀಕ್ಷಿತ ಮಟ್ಟದಲ್ಲಿ ವಸೂಲಾತಿ ಆಗದಿದ್ದರೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಹೊಣೆ ಮಾಡುವುದಾಗಿಯೂ ಎಚ್ಚರಿಸಿದೆ. ಒಟ್ಟಾರೆ 1,860.17 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದ್ದು, ಇವುಗಳ ವಸೂಲಾತಿ ಹೊಣೆಯನ್ನು ಆಸಕ್ತ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ವಹಿಸಲಾಗುತ್ತದೆ.

ಸಂಪುಟ ಸಭೆಯಲ್ಲೂ ದರ್ಶನ್ ಪ್ರಸ್ತಾವ

ಬೆಂಗಳೂರು: ದರ್ಶನ್‌ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಪ್ರಕರಣದ ಬೀಭತ್ಸತೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ಸಂಪುಟ ಸಭೆಯಲ್ಲಿ ಪ್ರಸ್ತಾವಿಸಿದ್ದು, ಈ ಬಗ್ಗೆ ಯಾರೂ ಮಾತನಾಡಬೇಡ್ರಯ್ಯ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ಸಭೆ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಈ ವಿಷಯ ಪ್ರಸ್ತಾವಿಸಿದ್ದಾರೆ. ಈ ಮೂಲಕ ದರ್ಶನ್‌ ರಕ್ಷಣೆಗೆ ಪ್ರಭಾವಿ ಸಚಿವರಿಂದ ಒತ್ತಡವಿದೆ ಎಂಬ ವದಂತಿಗಳಿಗೆ ಸಿಎಂ ತೆರೆ ಎಳೆದಂತಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಹೇಳುವ ಮೂಲಕ ಪೊಲೀಸ್‌ ತನಿಖೆಗೆ ಇನ್ನಷ್ಟು ಮುಕ್ತ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ.

ಸಿಎಂ ಹೇಳಿದ್ದೇನು?:

ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳು ತಮಗೆ ತೋರಿದ ದೃಶ್ಯಾವಳಿಗಳ ಬಗ್ಗೆ ಪ್ರಸ್ತಾವಿಸಿದ ಸಿದ್ದರಾಮಯ್ಯ ಅದರಂಥ ಕ್ರೂರತನವನ್ನು ನಾನು ನೋಡೇ ಇಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಘಟನಾವಳಿ ಅತ್ಯಂತ ಬೀಭತ್ಸವಾಗಿದೆ. ಈ ಬಗ್ಗೆ ಯಾರೂ ಪರ-ವಿರೋಧ ಚರ್ಚೆ ಮಾಡಬೇಡಿ. ಅನಗತ್ಯ ಮಾತುಗಳು ಬೇಡ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ದರ್ಶನ್‌ ಜತೆಗೆ ಆಪ್ತತೆ ಹೊಂದಿದ್ದ ಸಚಿವರು ಈ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಸಂಪುಟದ ಇತರ ನಿರ್ಣಯಗಳು:

 ರಾಜ್ಯದಲ್ಲಿನ 46,829 ಸರಕಾರಿ ಶಾಲೆ ಹಾಗೂ 1,234 ಪದವಿಪೂರ್ವ ಕಾಲೇಜುಗಳಿಗೆ ಉಚಿತ ನೀರು, ವಿದ್ಯುತ್‌ ಒದಗಿಸಲು 29.19 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ.

 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ರೋಟರಿ ಇಂಟರ್‌ನ್ಯಾಷನಲ್‌ ಸಂಸ್ಥೆ ಮೂಲಕ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ 2.37 ಕೋಟಿ ರೂ.

 ಕರ್ನಾಟಕ ವಿಧಾನಮಂಡಲ ಅಧಿವೇಶನದ ಸ್ಥಳ, ದಿನಾಂಕ, ವೇಳೆ ನಿಗದಿಪಡಿಸುವ ಅಧಿಕಾರ ಸಿಎಂ ಹೆಗಲಿಗೆ ವಹಿಸಿದ ಸಂಪುಟ ಸಭೆ.

 ಪ್ರಧಾನಮಂತ್ರಿ ಗ್ರಾಮ ಸಡಕ್‌, ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ 10 ವರ್ಷಗಳ ಹಿಂದೆ ನಿರ್ಮಿಸಿದ 7110 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಿ, 5 ವರ್ಷ ನಿರ್ವಹಣೆ ಮಾಡಲು ಪ್ರಗತಿ ಪಥ ಯೋಜನೆಗೆ ಅನುಮೋದನೆ. ಇದಕ್ಕಾಗಿ 5190 ಕೋಟಿ ರೂ.ಗಳನ್ನು ವಿಶ್ವಸಂಸ್ಥೆ ಸೇರಿದಂತೆ ಇನ್ನಿತರ ಬಾಹ್ಯ ನೆರವು ಪಡೆಯಲು ಸಮ್ಮತಿ.

Advertisement

Udayavani is now on Telegram. Click here to join our channel and stay updated with the latest news.

Next