Advertisement

ಕೆಎಸ್‌ಆರ್‌ಪಿಯಲ್ಲಿ ವರ್ಗಾವಣೆಗೂ ಫಿಟ್ನೆಸ್

04:46 PM Feb 17, 2021 | Team Udayavani |

ಕಲಬುರಗಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು  ನೀಡಲಾಗುತ್ತಿದೆ. ಸಿಬ್ಬಂದಿ ಫಿಟ್ನೆಸ್‌ ವಿಚಾರದಲ್ಲಿ “ಎ’, “ಬಿ’ ಮತ್ತು “ಸಿ’ ಎಂದು ಮೂರು ವಿಭಾಗ ಮಾಡಲಾಗಿದ್ದು, ವರ್ಗಾವಣೆಗೂ ಫಿಟ್ನೆಸ್ ಅನ್ವಯ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ ತಿಳಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್‌ಆರ್‌ಪಿ ಸಿಬ್ಬಂದಿ ವರ್ಗಾವಣೆ, ಬಡ್ತಿ, ಪದಕ ಪ್ರದಾನ ಸೇರಿದಂತೆ ಎಲ್ಲಕ್ಕೂ ದೈಹಿಕ ಕಾರ್ಯಕ್ಷಮತೆ ದೃಢಪಡಿಸುವುದು ಅನಿವಾರ್ಯ. ಅದರಂತೆ ಸಿಬ್ಬಂದಿಗೆ ಅಗತ್ಯ ಸೌಕರ್ಯ, ಉತ್ತಮ ಸಂಬಳ ಸಿಗುತ್ತಿದ್ದು, ಸಿಂಪತಿ, ಸಹಾನುಭೂತಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಬಿಟ್ಟು, ಸೌಕರ್ಯಕ್ಕೆ ತಕ್ಕಂತೆ ಕೆಲಸ ಮಾಡುವ ವ್ಯವಸ್ಥೆ ತಂದಿದ್ದೇವೆ ಎಂದರು.

ಫಿಟ್ನೆಸ್‌ ವಿಷಯದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಗಟ್ಟಿಮುಟ್ಟಾದವರನ್ನು “ಎ’, ದೇಹದ ತೂಕ ಹೆಚ್ಚಿದ್ದವರು, ದುಶ್ಚಟಗಳನ್ನು ಹೊಂದಿವರನ್ನು “ಬಿ’, ಕ್ಯಾನ್ಸರ್‌, ಹೃದ್ರೋಗ ಸೇರಿ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವರನ್ನು “ಸಿ’ ವಿಭಾಗದಲ್ಲಿ ಸೇರಿಸಿದ್ದೇವೆ. ದೈಹಿಕ ಪರಿಶ್ರಮದ ಮೂಲಕ “ಸಿ’ ವಿಭಾಗದವರು “ಬಿ’ಗೆ ಹಾಗೂ “ಬಿ’ ವಿಭಾಗದವರು “ಎ’ಗೆ ಅರ್ಹತೆ ಪಡೆಯಬೇಕು ಎಂದರು.

ಅತಿಯಾದ ತೂಕ ಮತ್ತು ಬೊಜ್ಜು ಹೊಂದಿದ್ದರೂ ಅನಾರೋಗ್ಯ ಎಂದೇ ಪರಿಗಣಿಸಲಾಗುತ್ತದೆ. ಬೊಜ್ಜು, ತೂಕ ಹೆಚ್ಚಾದವರನ್ನು ಗುರುತಿಸಿ ಈಗಾಗಲೇ ಆರೋಗ್ಯ
ಸರಿಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ವರ್ಗಾವಣೆ ಸಮಯದಲ್ಲೂ ದೈಹಿಕ ಆರೋಗ್ಯ ಪರಿಗಣಿಸಲಾಗಿತ್ತು. ಬೇರೆ ಸ್ಥಳಕ್ಕೆ ವರ್ಗಾವಣೆ ಮುಂಚೆಯೇ ಇರುವ ಸ್ಥಳದಲ್ಲೇ ತೂಕ ತಗ್ಗಿಸಿಕೊಂಡು ಹೋಗುವಂತೆ ಸೂಚಿಸುತ್ತಿದ್ದೇವೆ.

ತಮ್ಮ ಆರೋಗ್ಯ ಕಾರ್ಯಕ್ಷಮತೆ ತೋರಿಸಿದ ಬಳಿಕವೇ ಬಡ್ತಿ ಪೋಸ್ಟಿಂಗ್‌ ನೀಡುತ್ತಿದ್ದೇವೆ ಎಂದು ವಿವರಿಸಿದರು. ಸದ್ಯ ಕೆಎಸ್‌ಆರ್‌ಪಿಯಲ್ಲಿ “ಸಿ’ ವಿಭಾಗದಲ್ಲಿ 186 ಜನ, “ಬಿ’ ವಿಭಾಗದಲ್ಲಿ 1015 ಹಾಗೂ “ಎ’ ವಿಭಾಗದಲ್ಲಿ ಏಳು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. “ಬಿ’ ವಿಭಾಗದ 1015 ಸಿಬ್ಬಂದಿ ತಮ್ಮ ತೂಕಕ್ಕಿಂತ 10 ಕೆಜಿ ಹೆಚ್ಚಾಗಿದ್ದಾರೆ.

Advertisement

ಇವರಲ್ಲಿ ಈಗಾಗಲೇ 115ಕ್ಕೂ ಹೆಚ್ಚು ಜನ ತಮ್ಮ ಐದು ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. 135 ಜನ 2ರಿಂದ 5ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅದೇ ರೀತಿ “ಸಿ’ ವಿಭಾಗದಲ್ಲಿ ಗುರುತಿಸಿದ್ದ 15 ಮಂದಿ “ಬಿ’ ವಿಭಾಗಕ್ಕೆ ಅರ್ಹತೆ ಪಡೆದಿದ್ದಾರೆ. “ಬಿ’ ವಿಭಾಗದಲ್ಲಿದ್ದ 215 ಮಂದಿ ಸಂಪೂರ್ಣ ಫಿಟ್‌ ಆಗಿ “ಎ’ ವಿಭಾಗಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಎಸ್‌ಆರ್‌ಪಿ ಸಿಬ್ಬಂದಿ ಮಕ್ಕಳಿಗೂ ಕೋಚಿಂಗ್‌
ಕೆಎಸ್‌ಆರ್‌ಪಿ ಸಿಬ್ಬಂದಿ ಮಕ್ಕಳಿಗೂ ವಿವಿಧ ಪರೀಕ್ಷೆಗಳಿಗೆ ಮಾರ್ಗದರ್ಶನ, ಕೋಚಿಂಗ್‌ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿಂದ ಎಲ್ಲ ಬೆಟಾಲಿಯನ್‌ ಮಕ್ಕಳಿಗೆ ಕೋಚಿಂಗ್‌ ಆರಂಭವಾಗಲಿದೆ. ಜತೆಗೆ ಪೊಲೀಸ್‌ ಇಲಾಖೆಗೆ ಸೇರಲು ಇಚ್ಛಿಸುವ ಪೊಲೀಸರ ಮಕ್ಕಳಿಗೂ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ ಬೆಳಗಾವಿಯಲ್ಲಿ ತರಬೇತಿ ಆರಂಭವಾಗಿದ್ದು, ಮುಂದಿನ ತಿಂಗಳು ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಆರಂಭವಾಗಲಿದೆ.
ಅಲೋಕ್‌ ಕುಮಾರ,
ಎಡಿಜಿಪಿ, ಕೆಎಸ್‌ಆರ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next