Advertisement

ಮೊದಲು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬಳಿಕ ಭಡ್ತಿ

12:57 AM Jan 18, 2023 | Team Udayavani |

ಬೆಂಗಳೂರು: ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ನಡೆಯಲಿದೆ. ವರ್ಗಾವಣೆ ಪ್ರಕ್ರಿಯೆ ಮುಗಿದ ಬಳಿಕವೇ ಭಡ್ತಿ ಪ್ರಕ್ರಿಯೆಗೆ ಕೈ ಹಾಕುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್‌. ವಿಶಾಲ್‌ ಸ್ಪಷ್ಟಪಡಿಸಿದ್ದಾರೆ.

Advertisement

ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು ಮಾರ್ಚ್‌ 16ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ. ಆದರೆ ಅರ್ಹ ಶಿಕ್ಷಕರಿಗೆ ಬಡ್ತಿ ನೀಡದೆ ವರ್ಗಾವಣೆ ಪ್ರಕಿಯೆಗೆ ಕೈ ಹಾಕಿರುವುದರಿಂದ ಇನ್ನೆರಡೂ¾ರು ತಿಂಗಳಲ್ಲಿ ನಿವೃತ್ತರಾಗುವ, ಮುಖ್ಯೋಪಾಧ್ಯಾಯರಾಗುವ ಅರ್ಹತೆ ಹೊಂದಿರುವ ನೂರಾರು ಶಿಕ್ಷಕರು ಭಡ್ತಿಯಿಂದ ವಂಚಿತರಾಗುತ್ತಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆತಂಕ ವ್ಯಕ್ತಪಡಿಸಿತ್ತು.
ಆದರೆ ಸರಕಾರ ತಾನು ಈಗಾಗಲೇ ನಿಗದಿ ಪಡಿಸಿರುವ ವೇಳಾಪಟ್ಟಿ ಯಂತೆ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ತೀರ್ಮಾನಿಸಿದೆ. ನಮ್ಮ ಭಡ್ತಿ ಪ್ರಕ್ರಿಯೆ ಈಗಾಗಲೇ ತಡವಾಗಿದ್ದು ಇನ್ನೀಗ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಬದ್ಧರಾಗಿದ್ದೇವೆ ಎಂದು ಆರ್‌. ವಿಶಾಲ್‌ ಹೇಳಿದ್ದಾರೆ.

ಭಡ್ತಿಯಿಂದ ವಂಚಿತರಾಗಲಿದ್ದಾರೆ
ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಅವರ ಪ್ರಕಾರ, ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ಅಂತಿಮ ಪಟ್ಟಿ ಪ್ರಕಟಿಸುವ ಮೊದಲು ಅರ್ಹ ಹೆಚ್ಚುವರಿ ಶಿಕ್ಷಕರಿಗೆ ಭಡ್ತಿ ನೀಡಬೇಕು. ಒಂದು ವೇಳೆ ಬಡ್ತಿ ನೀಡದೆ ಹೋದರೆ ಸಾವಿರಕ್ಕಿಂತ ಹೆಚ್ಚು ಶಿಕ್ಷಕರು ಅರ್ಹ ಭಡ್ತಿಯಿಂದ ವಂಚಿತರಾಗುತ್ತಾರೆ. ಈಗಾ ಗಲೇ 9,000ಕ್ಕಿಂತ ಹೆಚ್ಚು ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿದೆ. ಈ ಪೈಕಿ ಸುಮಾರು 1,200 ಮಂದಿ ಇನ್ನು ಒಂದೆರಡು ತಿಂಗಳಲ್ಲಿ ನಿವೃತ್ತರಾಗಲಿದ್ದು ಅವರು ಭಡ್ತಿಯಿಂದ ವಂಚಿತರಾಗಲಿದ್ದಾರೆ ಎಂದು ಹೇಳುತ್ತಾರೆ.

ಮೊದಲು ಭಡ್ತಿ ಮಾಡಿ
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ನುಗ್ಲಿ, ಸಾಮಾನ್ಯವಾಗಿ ಏಪ್ರಿಲ್‌, ಮೇ ತಿಂಗಳಲ್ಲಿ ನಡೆಯುವ ವರ್ಗಾವಣೆ ಪ್ರಕ್ರಿಯೆಯನ್ನು ಸರಕಾರ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಏಕೆ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಶಿಕ್ಷಕರ ವರ್ಗಾವಣೆಗೂ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಹಾಗೆಯೇ 5ನೇ ತರಗತಿ ಮತ್ತು 8ನೇ ತರಗತಿಯ ಮೌಲ್ಯಂಕನ ಪರೀಕ್ಷೆ ಮಾರ್ಚ್‌ ತಿಂಗಳಲ್ಲಿ ನಡೆಯಲಿದ್ದು ವರ್ಗಾವಣೆ ಪ್ರಕ್ರಿಯೆ ನಡೆದರೆ ಮಕ್ಕಳಿಗೆ ಪಾಠ ಮಾಡಿದ ಶಿಕ್ಷಕರು ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊದಲು ಭಡ್ತಿ ಪ್ರಕ್ರಿಯೆ ನಡೆಸಿ ಆ ಬಳಿಕ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಈ ವಾದವನ್ನು ತಳ್ಳಿ ಹಾಕಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರತೀ ತಿಂಗಳು ನೂರಾರು ಶಿಕ್ಷಕರು ನಿವೃತ್ತರಾಗುತ್ತಿರುತ್ತಾರೆ. ಅವರಿಗಾಗಿ ನಾವು ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಮಾರ್ಚ್‌ 31 ರೊಳಗೆ ಅರ್ಹರಿಗೆ ಬಡ್ತಿ ಸಿಗಲಿದೆ. ಈಗಾಗಲೇ ಪ್ರಕಟಿಸಿರುವ ಭಡ್ತಿ ವೇಳಾಪಟ್ಟಿ ಅಬಾಧಿತವಾಗಿರಲಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next