Advertisement

ವಹಿವಾಟಿನ ವಿವರ ಸಲ್ಲಿಸದವರ ಪರವಾನಗಿ ರದ್ದು

05:09 PM Aug 24, 2018 | |

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ 2ರಿಂದ 100 ಕೋಟಿವರೆಗೆ ವಹಿವಾಟು ನಡೆಸುವ 200 ವ್ಯಾಪಾರಸ್ಥರು ವಾಣಿಜ್ಯ ತೆರಿಗೆ ಇಲಾಖೆಗೆ ವಹಿವಾಟಿನ ಬಗ್ಗೆ ಸರಿಯಾದ ವಿವರ ಸಲ್ಲಿಸಿಲ್ಲ. ಹಾಗಾಗಿ ಅಂತಹವರ ಪರವಾನಗಿ 6 ತಿಂಗಳೊಳಗೆ ರದ್ದು ಮಾಡಲಾಗುವುದು ಎಂದು ಜಂಟಿ ಆಯುಕ್ತ ಕೆ.ಎಸ್‌. ನಿಂಗೇಗೌಡ ಹೇಳಿದ್ದಾರೆ.

Advertisement

ಗುರುವಾರ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕುರಿತು ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲೆಯಲ್ಲಿನ ವ್ಯಾಪಾರಸ್ಥರಿಗೆ ತಮ್ಮ ಆದಾಯ ವಿವರ ನೀಡಲು ಏನು ಸಮಸ್ಯೆಗಳಿವೆಯೋ ಗೊತ್ತಿಲ್ಲ. ಏನೇ ಇದ್ದರು ಇಲಾಖೆಯ ಗಮನಕ್ಕೆ ತರಬೇಕು. ಅಂತವರಿಗೆ ಲೆಕ್ಕ ಪರಿಶೋಧಕರು ಸರಿಯಾದ ಮಾರ್ಗದರ್ಶನ ಮಾಡಿ ಜಾಗೃತಿ ಮೂಡಿಸಬೇಕು ಎಂದರು.

ಕಲಿಕೆ ಇಲ್ಲದೇ ಕಾಯ್ದೆ ಅನುಷ್ಠಾನ ಅಸಾಧ್ಯ. ಹಾಗಾಗಿ ಪ್ರತಿಯೊಬ್ಬ ವ್ಯಾಪಾರಸ್ಥರು ಕೂಡ ಕಾಲ ಕಾಲಕ್ಕೆ ಬದಲಾಗುವ ಹೊಸ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಆಗ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಎಲ್ಲದಕ್ಕೂ ಪರಿಹಾರ ಮಾರ್ಗ ಇರಲಿದೆ. ಅದನ್ನು ನಾವೇ ತಿಳಿದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್‌ ಪ್ರಾಸ್ತಾವಿಕ ಮಾತನಾಡಿ, ಜಿಎಸ್‌ಟಿ ಜಾರಿ ನಂತರ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಭಾರತದಲ್ಲಿ ಏಕಮಾದರಿ ಸರ್ವರ್‌ ಇದೆ. ಅಂತಹ ಸರ್ವರ್‌ ಒಮ್ಮೆ ಸ್ಥಗಿತವಾದರೆ ವ್ಯಾಪಾರಸ್ಥರ ಆದಾಯ ತೆರಿಗೆ ವಿವರವನ್ನು ನಿಗದಿತ ಸಮಯಕ್ಕೆ ಸಲ್ಲಿಕೆಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಳು ಸೇರಿ ನಾಲ್ಕು ಜೋನ್‌ಗಳಿಗೆ ಒಂದರಂತೆ ಸರ್ವರ್‌ ವ್ಯವಸ್ಥೆ ಮಾಡಿದರೆ ತುಂಬಾ ಸುಲಭವಾಗಿ
ಇಲಾಖೆಗೆ ವಿವರ ಸಲ್ಲಿಸಬಹುದು. ಆಗ ಜಿಎಸ್‌ಟಿ ಕಾಯ್ದೆಯು ಯಶಸ್ವಿಯಾಗುತ್ತದೆ ಎಂದರು.

ದೇಶದಲ್ಲಿ ಜೂನ್‌ 2017ರಿಂದ ಮಾರ್ಚ್‌ 2018ರ ಒಳಗೆ 2.29 ಕೋಟಿಯಷ್ಟು ಇಲಾಖೆಗೆ ಆದಾಯ ತೆರಿಗೆದಾರರ ವಿವರ ಸಲ್ಲಿಸಲಾಗಿತ್ತು. ಪ್ರಸ್ತುತ ಕಳೆದ ಮಾರ್ಚ್‌ನಿಂದ ಆಗಸ್ಟ್‌ ಒಳಗೆ 3.29 ಕೋಟಿಯಷ್ಟು ದಾಖಲೆಯ ವಿವರ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಜಿಎಸ್‌ಟಿಯಿಂದ ಸಾಕಷ್ಟು ಬೆಳವಣಿಗೆ ಸಾಧಿಸಿದ್ದೇವೆ ಎಂದು ಹೇಳಿದರು.
 
ನೂತನ ವೆಬ್‌ಸೈಟ್‌ ಅನ್ನು ಜಿಎಸ್‌ಟಿ ಜಂಟಿ ಆಯುಕ್ತ ಡಾ| ಎಂ.ಪಿ. ರವಿಪ್ರಸಾದ್‌ ಬಿಡುಗಡೆ ಮಾಡಿ, ಉಪನ್ಯಾಸದಲ್ಲಿ ವೆಬ್‌ಸೈಟ್‌ ಕುರಿತು ಮಾಹಿತಿ ನೀಡಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಜಿ.ಬಸವರಾಜಪ್ಪ, ಟಿ. ರಾಜು, ಎಚ್‌.ಟಿ. ಸುಧೀಂದ್ರರಾವ್‌, ಲೆಕ್ಕ ಪರಿಶೋಧಕ ವೆಂಕಟೇಶ್‌ ಮತ್ತಿತರಿದ್ದರು. ಕೆ.ಎಸ್‌. ರುದ್ರಸ್ವಾಮಿ ಸ್ವಾಗತಿಸಿದರು. ಶ್ರೀಕಾಂತ್‌ ಭಟ್‌ ನಿರೂಪಿಸಿದರು.

Advertisement

ವಾರ್ಷಿಕ ತೆರಿಗೆ ಗುರಿ 50 ಸಾವಿರ ಕೋಟಿ….
ಬದಲಾವಣೆ ಜಗದ ನಿಯಮ. ಹಾಗೆಯೇ 1957ರ ಸೆಪ್ಟಂಬರ್‌ಗಿಂತ ಮುಂಚೆ ರಾಜ್ಯದಲ್ಲಿ ವಿವಿಧ ರೀತಿಯ ತೆರಿಗೆಯ ಕಾನೂನುಗಳಿದ್ದವು. ನಂತರ ಬಾಂಬೆ, ಹೈದರಾಬಾದ್‌ ಕರ್ನಾಟಕ, ಕೊಡಗು, ಮಂಗಳೂರು ಇವುಗಳನ್ನೆಲ್ಲಾ ಏಕೀಕರಿಸಿ 1957
ಸೆ.30ರಂದು ಮೈಸೂರು ಮಾರಾಟ ತೆರಿಗೆ ಜಾರಿಗೆ ತರಲಾಯಿತು. ಆಗ ಇಲಾಖೆಯ ವಾರ್ಷಿಕ ಗುರಿ ಕೇವಲ 3.5 ಕೋಟಿಯಷ್ಟಿತ್ತು. ನಂತರದ 50 ವರ್ಷದಲ್ಲಿ ಅಂದರೆ 2007-08ರಲ್ಲಿ ವಾರ್ಷಿಕ ಗುರಿ 13,160 ಕೋಟಿಯಷ್ಟಾಯಿತು. ಈಗ ಆದಾಯ ತೆರಿಗೆಯಲ್ಲಿ ಸಾಕಷ್ಟು ಹೊಸ ನೀತಿ ನಿಯಮಗಳು, ಕಾನೂನುಗಳು ಜಾರಿಯಾಗಿವೆ. ಈಗ 2016-17ನೇ ಸಾಲಿಗೆ ವಾರ್ಷಿಕ ತೆರಿಗೆ ಗುರಿ 50 ಸಾವಿರ ಕೋಟಿಯಷ್ಟಾಗಿದೆ.
ಡಾ| ಬಿ.ಟಿ. ಬಾಣೇಗೌಡ, ಜಂಟಿ ಆಯುಕ್ತ, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next