ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಗ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಬಳಿಕ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿಯ ಶ್ರೀಕೃಷ್ಣ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದು 25 ದಿವಸಗಳಾದರೂ ಮಂತ್ರಿಮಂಡಲ ರಚನೆಯಾಗದೆ ಜನತೆಗೆ ತೊಂದರೆಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಸರಕಾರದಿಂದ ದೊರಕಬೇಕಾದ ಯಾವುದೇ ಸವಲತ್ತು ದೊರಕುತ್ತಿಲ್ಲ. ಅನುದಾನಗಳ ಬಿಡುಗಡೆಯಾಗದೆ ಜನರು ಕಂಗೆಟ್ಟಿದ್ದಾರೆ. ಏತನ್ಮಧ್ಯೆ, ಯಡಿಯೂರಪ್ಪನವರ ಮಗ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂದು ಟೀಕಿಸಿದರು.
ರಾಜ್ಯದ ಹಲವಾರು ಪ್ರದೇಶಗಳಲ್ಲಿ ನೆರೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸುವುದು ಸವಾಲು. ಇಂತಹ ವಿಷಮ ಪರಿಸ್ಥಿತಿ ಇದ್ದರೂ ಜನರ ಕಷ್ಟ ಕೇಳಲು ಸರಕಾರದಲ್ಲಿ ವ್ಯವಸ್ಥೆಗಳಿಲ್ಲದಿರುವುದು ಶೋಚನೀಯ. ಸಂತ್ರಸ್ತರು ಹೊಸ ಜೀವನ ನಡೆಸಲು ಬೇಕಾದ ನೆರವು ನೀಡಲು ಸರಕಾರ ಮುಂದೆ ಬರಬೇಕು.
ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಬಳಸಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಸೇರಿ ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಯಾಗಿ ಸ್ಪರ್ಧಿಸುವ ಬಗ್ಗೆ ಹಿರಿಯರು ತೀರ್ಮಾನಿಸುತ್ತಾರೆ. ಈ ಮಧ್ಯೆ, ಸರಕಾರ ವಿಸರ್ಜನೆಯಾಗಿ 224 ಕ್ಷೇತ್ರಕ್ಕೂ ಚುನಾವಣೆ ನಡೆದರೂ ಅಚ್ಚರಿಯಿಲ್ಲ ಎಂದರು.
ಕೇಂದ್ರದ ಅನುದಾನ ಏನು?: ಹಿಂದೆ ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಯುಪಿಎ ಸರಕಾರ ತಕ್ಷಣ ಒಂದು ಸಾವಿರ ಕೋಟಿ ರೂ.ಗಳ ನೆರವು ನೀಡಿತ್ತು. ಆದರೆ, ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಯಾವುದೇ ಪರಿಹಾರದ ಮೊತ್ತ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿಗಳು ರಾಜ್ಯದ ಪ್ರತಿ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿ ಪಡೆಯದೆ ಅನುದಾನ ಘೋಷಿಸಿದ್ದಾರೆ. ಹೀಗಾಗಿ, ತಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮಗ್ರ ವರದಿಯೊಂದಿಗೆ ಸೂಕ್ತ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.