ಗುವಾಹಟಿ : ನೂತನ ಆವಿಷ್ಕಾರ, ಸುಧಾರಣೆಗಳ ಮೂಲಕ ಈಗಾಗಲೇ ಬಹು ಪ್ರಶಂಸೆಗೆ ಪಾತ್ರವಾಗಿರುವ ಭಾರತೀಯ ರೈಲ್ವೆ, ಅಸ್ಸಾಂನಲ್ಲಿ ಮತ್ತೂಂದು ಹೊಸ ಪ್ರಯತ್ನ ಮಾಡಿದ್ದು, ಗುವಾಹಟಿ ರೈಲ್ವೆ ಸ್ಟೇಷನ್‌ನಲ್ಲಿ ಸಂಪೂರ್ಣ ಲೈಂಗಿಕ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಟೀ ಸ್ಟಾಲ್ ಸ್ಥಾಪಿಸಿದೆ. ಈ ಮೂಲಕ ತೃತೀಯಲಿಂಗಿಗಳ ಬದುಕನ್ನು ಕಟ್ಟಿಕೊಡುವಲ್ಲಿ ರೈಲ್ವೆ ಹೊಸ ಹೆಗ್ಗರುತು ಮೂಡಿಸಿದೆ. ಅಂದ ಹಾಗೆ ಇಂಥ ಪ್ರಯತ್ನ ದೇಶದಲ್ಲಿಯೇ ಮೊದಲ ಬಾರಿಯಾಗಿದೆ.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣ ದೃಷ್ಟಿಯಿಂದ ರೈಲ್ವೆ ನಿಲ್ದಾಣದಲ್ಲಿ “ಟ್ರಾನ್ಸ್ ಟೀ ಸ್ಟಾಲ್’ ಸ್ಥಾಪನೆಗೆ ಈಶಾನ್ಯ ರೈಲ್ವೆ ಚಿಂತನೆ ನಡೆಸಿ,ಯೋಜನೆ ಕಾರ್ಯಗತಗೊಳಿಸಿದೆ. ಆಲ್ ಅಸ್ಸಾಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್ ಕೂಡ ಈ ಪ್ರಯತ್ನಕ್ಕೆ ಕೈ ಜೋಡಿಸಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲ್ವೆ ನಿಲ್ದಾಣಗಳಲ್ಲೂ “ಟ್ರಾನ್ಸ್ ಟೀ ಸ್ಟಾಲ್’ ತೆರೆಯಲಿದ್ದೇವೆ ಎಂದು ಈಶಾನ್ಯ ರೈಲ್ವೆ ವಕ್ತಾರ ಸವ್ಯಸಾಚಿ ದೇ ತಿಳಿಸಿದ್ದಾರೆ.