ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರೈಲು ತಡೆ ಚಳವಳಿಗೆ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಕೆಲಗಂಟೆಗಳ ಕಾಲ ರೈಲು ತಡೆದು ಪ್ರತಿಭಟಿಸಿದರು.
ಇದನ್ನೂ ಓದಿ:ಮೋದಿ ಶಕ್ತಿ ಕುಗ್ಗಿಸಲು RJD, ಕಾಂಗ್ರೆಸ್ ಗೆ ವಿಜಯೇಂದ್ರ ಹಣ ನೀಡಿದ್ದಾರೆ: ಯತ್ನಾಳ್ ಬಾಂಬ್
12ಗಂಟೆಯಿಂದ ರೈಲು ತಡೆ ಚಳವಳಿ ಆರಂಭಗೊಂಡಿದ್ದು, 4ಗಂಟೆವರೆಗೆ ಶಾಂತಿಯುತವಾಗಿ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಮುಂಜಾಗ್ರತಾ ಕ್ರಮವಾಗಿ ಹಲವೆಡೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಪಂಜಾಬ್ ಮತ್ತು ಹರ್ಯಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ದೆಹಲಿ ಸಮೀಪದ ಗಾಜಿಯಬಾದ್ ಗಡಿ ಪ್ರದೇಶದಲ್ಲಿ ನವೆಂಬರ್ ತಿಂಗಳಿನಿಂದ ಹೆದ್ದಾರಿಯನ್ನು ತಡೆದು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ.
ಹರ್ಯಾಣದಲ್ಲಿ ಸೋನಿಪತ್, ಅಂಬಾಲಾ ಮತ್ತು ಜಿಂದ್ ರೈಲು ನಿಲ್ದಾಣ ಸಂಪೂರ್ಣ ಬಂದ್ ಮಾಡಲಾಗಿದೆ. ಅಂಬಾಲಾ, ಕುರುಕ್ಷೇತ್ರ, ಪಾಣಿಪತ್, ಪಂಚ್ ಕುಲಾ ಮತ್ತು ಫತೇಬಾದ್ ಜಿಲ್ಲೆಗಳಲ್ಲಿ ಮಹಿಳೆಯರು ರೈಲ್ವೆ ಟ್ರ್ಯಾಕ್ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಂಜಾಬ್ ನಲ್ಲಿ ದೆಹಲಿ-ಲುಧಿಯಾನಾ-ಅಮೃತ್ ಸರ್ ರೈಲ್ವೆ ಸಂಚಾರದ ಟ್ರ್ಯಾಕ್ ಅನ್ನು ಪ್ರತಿಭಟನಾಕಾರರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಜಲಂಧರ್ ಕಂಟೋನ್ಮೆಂಟ್-ಜಮ್ಮು ರೈಲ್ವೆ ಟ್ರ್ಯಾಕ್ ಅನ್ನು ರೈತರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಬೆಂಗಳೂರಿನಲ್ಲಿ ರೈಲ್ವೆ ನಿಲ್ದಾಣದೊಳಗೆ ತೆರಳಿ ಪ್ರತಿಭಟನೆ ನಡೆಸಲು ರೈತರಿಗೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ನಮಗೆ ಪೊಲೀಸರು ರೈಲು ತಡೆದು ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ. ಪ್ರತಿಭಟನೆಗೆ ಅನುಮತಿ ಕೊಡುವುದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ರೈತ ಮುಖಂಡರು ಹೇಳಿದರು.