ನವದೆಹಲಿ: ‘ಲೋಕಸಭೆ ಕಲಾಪಗಳಲ್ಲಿ ಸಂಸದರು ಕಡ್ಡಾಯವಾಗಿ ಭಾಗವಹಿಸಬೇಕು. ಸದನಕ್ಕೆ ಯಾರೂ ಗೈರಾಗಬಾರದು’ ಬಿಜೆಪಿ ಸಂಸದರಿಗೆ ಹೀಗೊಂದು ಖಡಕ್ ಸೂಚನೆ ನೀಡಲಾಗಿದೆ. ಶನಿವಾರ ನವದೆಹಲಿಯಲ್ಲಿ ಆರಂಭವಾಗಿರುವ ‘ಅಭ್ಯಾಸ ವರ್ಗ’ ಅಥವಾ ತರಬೇತಿ ಶಿಬಿರದಲ್ಲಿ ಸಂಸದರಿಗೆ ಈ ಸೂಚನೆ ನೀಡಲಾಗಿದೆ. 2 ದಿನಗಳ ತರಬೇತಿಯಲ್ಲಿ ಹೊಸತಾಗಿ ಆಯ್ಕೆಯಾದ ಮತ್ತು ಹಿಂದಿನ ಸಂಸದರನ್ನು ಒಟ್ಟು ಸೇರಿಸಿ ಸಂಸದೀಯ ನಡಾವಳಿಗಳು, ನಡತೆ, ತಾತ್ವಿಕ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಿಜೆಪಿ ಸಂಸದರೊಬ್ಬರು ಮಾತನಾಡಿ ‘ಹೆಚ್ಚಿನ ಸಂಸದರು ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಜತೆಗೆ ಇತರ ಪಕ್ಷಗಳಿಂದ ಬಿಜೆಪಿಗೆ ಸೇರಿ ಗೆದ್ದಿದ್ದಾರೆ. ಅವರಿಗೆ ಸಂಸದೀಯ ನಡಾವಳಿ ಮತ್ತು ಪಕ್ಷದ ವಿಚಾರಧಾರೆಯ ಪರಿಚಯ ಮಾಡುವ ನಿಟ್ಟಿನಲ್ಲಿ ಈ ತರಗತಿ ನಡೆಯುತ್ತಿದೆ. ಇಂಥ ಅಭ್ಯಾಸ ವರ್ಗ ಆಗಾಗ ನಡೆಯುತ್ತಿರುತ್ತದೆ’ ಎಂದು ಹೇಳಿದ್ದಾರೆ.
ಸೇರ್ಪಡೆ ಅಲ್ಲ: ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಎನ್ನುವುದು ಸಂಘಟನಾತ್ಮಕ ಪಕ್ಷವೇ ಹೊರತು ಸೇರ್ಪಡೆಯಿಂದ ಉಂಟಾದ ಪಕ್ಷವಲ್ಲ. ಇಂಥ ಸಾಧನೆ ಮಾಡಲು ಸರಿಯಾದ ನೆಲೆಗಟ್ಟು ಇರುವ ತಾತ್ವಿಕ ಮತ್ತು ಸಂಘಟನಾತ್ಮಕ ವ್ಯವಸ್ಥೆ ಕಾರಣವಾಗಿದೆಯೇ ಹೊರತು ಕೌಟುಂಬಿಕ ಪ್ರಭಾವ ಅಲ್ಲ’ ಎಂದು ಹೇಳಿದ್ದಾರೆ.
ಸಂಸದರ ಜತೆ ಕುಳಿತ ಪಿಎಂ
ಕಾರ್ಯಕ್ರಮ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಸಂಸದರ ಸಾಲಿನಲ್ಲಿ ಕುಳಿತು ವಿವಿಧ ಉಪನ್ಯಾಸಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಫೋಟೋ ವೈರಲ್ ಆಗಿದೆ. ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವ ಬದಲು ಕೊಂಚ ಹಿಂದಿನ ಸಾಲಿನಲ್ಲಿ ಕುಳಿತು, ಪ್ರಧಾನಿಯೆಂಬ ಹಮ್ಮು ಬಿಟ್ಟು ಕೊಟ್ಟು ಸರಳತೆ ಮೆರೆದಿದ್ದಾರೆ.