ಬೆಂಗಳೂರು: ರೈಲ್ವೆ ಇಲಾಖೆಯನ್ನು ಜನಸ್ನೇಹಿಯಾಗಿಸಿ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ಹಾಗೂ ಸೇವೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ವಿಭಾಗ ಮಿಷನ್ ಕರ್ಮಯೋಗಿ ಅಡಿಯಲ್ಲಿ ಮುಂಚೂಣಿ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ.
ಮಿಷನ್ ಕರ್ಮಯೋಗಿ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿಗಾಗಿ ಹೊಸ ರಾಷ್ಟ್ರೀಯ ವಾಸ್ತು ಶಿಲ್ಪದ ಪರಿಕಲ್ಪನೆಯಾಗಿದ್ದು ಕೌಶಲ್ಯ ಅಭಿವೃದ್ಧಿ ಪಡಿಸುವ, ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಪ್ರಯಾಣಿಕರಿಗೆ ಹತ್ತಿರವಾಗಲು ಜಾರಿಗೊಳಿಸಿರುವ ಯೋಜನೆಯಾಗಿದೆ.
ಇದೇ ಮೊದಲ ಬಾರಿ ರೈಲ್ವೆ ಇಲಾಖೆಯ ಫ್ರಂಟ್ ಲೈನ್‌ವರ್ಕ್‌ಗಳಿಗೆ ಕರ್ಮಯೋಗಿ ಯೋಜನೆಯಡಿ ತರಬೇತಿ ನೀಡಲು ಮುಂದಾಗಿದ್ದು ಇದರಡಿಯಲ್ಲಿ ಮೂರು ರಾಜ್ಯಗಳ 15 ಜಿಲ್ಲೆಗಳನ್ನು ಒಳಗೊಂಡ ನೈಋತ್ಯ ಬೆಂಗಳೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ 14 ಬ್ಯಾಚ್‌ಗಳಲ್ಲಿ ಒಂದು ತಿಂಗಳ ತರಬೇತಿ ನೀಡಲಾಗಿದೆ.
ರೈಲ್ವೆ ಮುಂಚೂಣಿ ಸಿಬ್ಬಂದಿಗೆ ವಿಶೇಷವಾಗಿ 8 ವಿಭಾಗದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಇದಕ್ಕಾಗಿ ಕ್ಯಾಪಾಸಿಟಿ ಬಿಲ್ಡಿಂಗ್ ಸಂಸ್ಥೆ ಹಾಗೂ ರೈಲ್ವೆ ಇಲಾಖೆಯ ಸಹಯೋಗದಲ್ಲಿ ಪಿಇಡಿಜಿಒಜಿ ಆ್ಯಪ್ ಮೂಲಕ ತರಬೇತಿ ಮೌಲ್ಯ ಮಾಪನ ಮಾಡಲಾಗಿದೆ. ಇಲ್ಲಿ ಸಿಬ್ಬಂದಿಗಳಿಗೆ ಸರ್ಕಾರಿ ಉದ್ಯೋಗಿಯಾಗಿ ಹೇಗಿರಬೇಕು, ಯಾವ ರೀತಿಯಲ್ಲಿ ಜನರಿಗೆ ಮಾಹಿತಿ ಹಾಗೂ ಸೇವೆ ನೀಡಬೇಕು. ಗ್ರಾಹಕ ಸೇವೆಯನ್ನು ಹೇಗೆ ಉತ್ತಮ ಪಡಿಸಬೇಕು. ತುರ್ತು ಅವಶ್ಯಕತೆಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ. ಇದರಿಂದ ಮುಂದಿನ ದಿನಲ್ಲಿ ಸಿಬ್ಬಂದಿ ಪ್ರಯಾಣಿ ಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲು ಸಹಾಯವಾಗಲಿದೆ.
ಯಾರಿಗೆ ತರಬೇತಿ? : ಪ್ರಯಾಣಿಕರ ಸಂಪರ್ಕಕ್ಕೆ ಹಾಗೂ ಸಹಾಯ ಬರುವವರು ಮೊದಲಿಗೆ ಟಿಕೆಟ್ ವಿತರಕರು, ಟಿಕೆಟ್ ಕಾಯ್ದಿರಿಸುವವರು, ರೈಲ್ವೆ ಟಿ.ಟಿ., ವಾಣಿಜ್ಯ ಇನ್ಸ್ ಪೆಕ್ಟರ್ ಹಾಗೂ ಸ್ಟೇಶನ್ ಮಾಸ್ಟರ್, ರೈಲ್ವೆ ಟ್ರಾಫಿಕ್ ಇನ್ಸ್‌ಪೆಕ್ಟರ್ ಅವರಿಗೆ ತರಬೇತಿ ನೀಡಲಾಗಿದೆ. ಜನಸಾಮಾನ್ಯರಿಗೆ ಈ ಸಿಬ್ಬಂದಿ ಸರಿಯಾದ ಮಾಹಿತಿ ನೀಡಿದೆ ದುರ್ವರ್ತನೆ ತೋರುತ್ತಿದ್ದರು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕಳೆದೊಂದು ತಿಂಗಳಲ್ಲಿನಲ್ಲಿ 1,354 ಸಿಬ್ಬಂದಿಗಳಲ್ಲಿ 1302 ಮಂದಿ ತರಬೇತಿ ಪೂರ್ಣಗೊಳಿಸಿದ್ದು, ಸುಮಾರು 52 ಸಿಬ್ಬಂದಿ ತರಬೇತಿ ಬಾಕಿ ಉಳಿದಿದೆ.
ರೈಲ್ವೆ ಮುಂಚೂಣಿ ಸಿಬ್ಬಂದಿಗಳಿಗೆ ಸವಾಲುಗಳನ್ನು ಎದುರಿಸಲು, ಹೊಸತನದ ತುಡಿತ, ಉತ್ಸಾಹಯುತವಾಗಿ ಹಾಗೂ ಸೃಜನಶೀಲತೆ ಹೊಂದಿರಬೇಕು ಹಾಗೂ ಪ್ರಯಾಣಿಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲು ಕರ್ಮಯೋಗಿ ಕಾರ್ಯಕ್ರಮದ ಮೂಲಕ ಅಗತ್ಯವಿರುವ ತರಬೇತಿಯನ್ನು ನೀಡಲಾಗಿದೆ.
–ಕುಸುಮಾ ಹರಿಪ್ರಸಾದ್, ಸಹಾಯಕ ವಿಭಾಗೀಯ ಮ್ಯಾನೇಜರ್,ನೈಋತ್ಯ ರೈಲ್ವೆ
–ತೃಪ್ತಿ ಕುಮ್ರಗೋಡು