Advertisement

ಕಾಮಗಾರಿ ಪರಿವೀಕ್ಷಣೆ ಸಮಿತಿ ಸದಸ್ಯರಿಗೆ ತರಬೇತಿ

10:54 AM Dec 11, 2018 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಲಬುರಗಿ ವಿಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಪರಿವೀಕ್ಷಣೆಗಾಗಿ ಗ್ರಾಮ ಮಟ್ಟದ ವಿವಿಧ ಸಮಿತಿಗಳ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದ್ದು, ಸದಸ್ಯರು
ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ ಯಾದವ ಹೇಳಿದರು.

Advertisement

ನಗರದ ಎಚ್‌ಕೆಆರ್‌ಡಿಬಿ ಸಭಾಂಗಣದಲ್ಲಿ ಹೈ. ಕ. ಪ್ರದೇಶದ ಆರು ಜಿಲ್ಲೆಗಳ ವಿವಿಧ ಸಮಿತಿಗಳ ಸದಸ್ಯರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಮೊದಲನೇ ಹಂತದಲ್ಲಿ ಮಂಡಳಿಯಿಂದ ಪ್ರತಿ ತಾಲೂಕಿಗೆ ಇಬ್ಬರಂತೆ ಸ್ಥಳೀಯ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ತರಬೇತಿ ಶಿಬಿರದಲ್ಲಿ ಎಲ್ಲ ಸದಸ್ಯರಿಗೆ ತರಬೇತಿ ನೀಡಬೇಕು ಎಂದು ಹೇಳಿದರು. 

ಹೈ.ಕ. ಪ್ರದೇಶದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಮಂಡಳಿಯಲ್ಲಿರುವ ಅಧಿಕಾರಿಗಳು ಹಾಗೂ ಮೂರನೇ ತಂಡ ಪರಿಶೀಲಿಸಲಿದೆ ಹಾಗೂ ಮೇಲುಸ್ತುವಾರಿ ಮಾಡಲಿದೆ. ಆದರೆ ಕಾಮಗಾರಿಗಳ ಗುಣಮಟ್ಟ ಮತ್ತು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಹಾಗೆ ನೋಡಿಕೊಳ್ಳುವ ನೂತನ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ವ್ಯವಸ್ಥೆ ಸಮರ್ಪಕವಾಗಿ ಕಾರ್ಯಗತ ಆದಲ್ಲಿ ಗುಣಾತ್ಮಕ ಕೆಲಸ ಮಾಡಿಸಲು ಅನುಕೂಲವಾಗುತ್ತದೆ.

ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಎಸ್‌ಡಿಎಂಸಿ, ಬಾಲವಿಕಾಸ ಸಮಿತಿ, ಗ್ರಾಮ ಆರೋಗ್ಯ ಸಮಿತಿ, ಗ್ರಾಮ ನೀರು ನೈರ್ಮಲ್ಯ ಸಮಿತಿ, ಕೆರೆ ಅಭಿವೃದ್ಧಿ ಸಮಿತಿ, ನೀರು ಬಳಕೆದಾರರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಹಾಗೂ ಸ್ತ್ರೀಶಕ್ತಿ ಒಕ್ಕೂಟಗಳ ಸದಸ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. ಪರಿವೀಕ್ಷಣೆಗೆ ತರಬೇತಿ ಪಡೆದ ಸದಸ್ಯರು ತಮ್ಮ ಗ್ರಾಮದಲ್ಲಿ ನಡೆಯುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಾರಂಭವಾಗಿರುವ ಬಗ್ಗೆ ಅಥವಾ ಕಾಮಗಾರಿ ವಿಳಂಬವಾಗಲು ಕಾರಣ ತಿಳಿಸಬೇಕು. ಆರಂಭವಾದ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. 

ಕಳಪೆಯಾಗಿದ್ದರೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ವಾಟ್ಸ್‌ ಆ್ಯಪ್‌ ಸಂಖ್ಯೆ 9482001912ಗೆ ಛಾಯಾಚಿತ್ರ ಅಥವಾ ವಿಡಿಯೋ ಕಳುಹಿಸಬೇಕು. ಇದರಲ್ಲಿ ದಾಖಲಾದ
ವಿಷಯಗಳನ್ನು ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

Advertisement

ಎಚ್‌ಕೆಆರ್‌ಡಿಬಿ ಜಂಟಿ ನಿರ್ದೇಶಕ ಬಸವರಾಜ ಮಾತನಾಡಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಮೇಲೆ ಅತಿಯಾದ ಭರವಸೆಯನ್ನಿಟ್ಟು ತರಬೇತಿಗೆ ಹೆಸರುಗಳನ್ನು ಸೂಚಿಸಿದ್ದಾರೆ.

ತಾವು ಸಂಪೂರ್ಣ ತರಬೇತಿ ಪಡೆದು ಇನ್ನುಳಿದ ಸದಸ್ಯರಿಗೆ ಧನಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ತರಬೇತಿ ನೀಡಬೇಕು. ಮಂಡಳಿಯಿಂದ ವಿನೂತನ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಾವುದೇ ಆಮಿಷಗಳಿಗೆ ಒಳಗಾಗದೇ ನೈಜ ಸ್ಥಿತಿ ವರದಿ ಮಾಡಬೇಕು.

ಮಂಡಳಿಯಿಂದ ಹಲವಾರು ಸಂಸ್ಥೆಗಳಿಗೆ ಪೀಠೊಪಕರಣ, ಯಂತ್ರೋಪಕರಣಗಳ ಸರಬರಾಜು ಮಾಡಲಾಗಿದೆ. ಅವುಗಳ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ತಮ್ಮ ಗ್ರಾಮದ ಕಾಮಗಾರಿಗಳು ವೇಗವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣವಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಎಚ್‌ಕೆಆರ್‌ಡಿಬಿ ಹೆಚ್ಚುವರಿ ಕಾರ್ಯದರ್ಶಿ ಜಹೀರಾ ನಸೀಮ್‌, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್‌, ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next