ಬೆಳ್ತಂಗಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳಿಗೆ ಎ. 20ರಂದು ಉಜಿರೆಯ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಹಿನ್ನೆಲೆ ಸಾವಿರಕ್ಕೂ ಅಧಿಕ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಊಟ, ಉಪಾಹಾರ ಅವ್ಯವಸ್ಥೆಯಿಂದ ಅಧಿಕಾರಿಗಳು ತರಬೇತಿ ನೀಡಲು ನಿಯೋಜಿಸಿದವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶನಿವಾರ ಪಿಆರ್‌ಒ, ಎಪಿಆರ್‌ಒ, ಪಿಒ ಸೇರಿ ಒಟ್ಟು 281 ತಂಡದಂತೆ ಒಟ್ಟು 1156 ಮಂದಿ ಹಾಗೂ ಇವರನ್ನು ತರಬೇತಿಗೊಳಿಸುವ ಆರ್‌ಒ, ಸೆಕ್ಟರ್ ಅಧಿಕಾರಿಗಳು ಸೇರಿ 1,400ಕ್ಕೂ ಅಧಿಕ ಮಂದಿ ಹಾಜರಾಗಿದ್ದರು.
ಅಧಿಕಾರಿಗಳಿಗೆ ನಿಗದಿಪಡಿಸಿದಂತೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಭೋಜನ, ಸಂಜೆ ಲಘು ಉಪಾಹಾರ ನೀಡಬೇಕಿತ್ತು. ಆದರೆ ಬೆಳಗ್ಗೆ ಉಪಾಹಾರ ಅವ್ಯವಸ್ಥೆ, ಮಧ್ಯಾಹ್ನ ಊಟದ ಅವ್ಯವಸ್ಥೆ ಸಹಿತ, ಸಂಜೆ ಸಮರ್ಪಕವಾಗಿ ಲಘು ಉಪಾಹಾರ ನೀಡದೆ ಇರುವ ವಿಚಾರಕ್ಕೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಚುನಾವಣೆ ಸಂದರ್ಭದಲ್ಲಿ ಮುಂಚಿತವಾಗಿಯೇ ಚುನಾವಣ ಕರ್ತವ್ಯಕ್ಕೆ ನೇಮಿಸಿದ ಪಿಆರ್‌ಒ, ಎಪಿಆರ್‌ಒ, ಪಿಒಗಳ ಸಂಖ್ಯೆ ನಿಗದಿಯಾಗಿರುತ್ತದೆ. ಯಾರೂ ಕೂಡ ಗೈರುಹಾಜರಾಗುವುದಿಲ್ಲ. ಬೇರೆ ಜಿಲ್ಲೆಯ ಬೇರೆ ಬೇರೆ ತಾಲೂಕಿನಿಂದ ಆನೇಕ ಮಂದಿ ಮುಂಜಾನೆ ಬೇಗ ಬಂದು ತರಬೇತಿಗೆ ಹಾಜರಾಗುತ್ತಾರೆ. ಆರೋಗ್ಯ ಸಮಸ್ಯೆ ಉಳ್ಳವರು, ಲೋ ಬಿಪಿ, ಮಧುಮೇಹದಿಂದ ಬಳಲುವವರಿದ್ದಾರೆ. ಈ ವೇಳೆ ಸೂಕ್ತ ಉಪಾಹಾರ ವ್ಯವಸ್ಥೆ ಬೇಕಾಗುತ್ತದೆ. ಆದರೆ ಪ್ರತಿ ಬಾರಿ ಇಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿರುತ್ತದೆ. ಶನಿವಾರ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಅಧಿಕಾರಿಗಳು ಆಕ್ರೋಶಕ್ಕೆ ಒಳಗಾಗಿದ್ದರು.
1,400 ಸಿಬಂದಿಗೆ ಆವಶ್ಯಕವಾಗುವಷ್ಟು ಭೋಜನ ಮುಂಚಿತವಾಗಿ ಸಿದ್ಧಪಡಿಸಿಲ್ಲ, ಮಧ್ಯಾಹ್ನ ಬಹುತೇಕ ಮಂದಿಗೆ ಭೋಜನ ಲಭಿಸಿರಲಿಲ್ಲ, 2 ಗಂಟೆ ವೇಳೆಗೆ ಊಟವೇ ಇಲ್ಲದ ಪರಿಸ್ಥಿತಿಯಾಗಿತ್ತು.
ಇನ್ನುಳಿದಂತೆ ನೂಕುನುಗ್ಗಲಿನ ಪರಿಸ್ಥಿತಿ ಕಂಡು ಹೆಚ್ಚಿನ ಸಿಬಂದಿ ಸ್ಥಳೀಯ ಹೊಟೇಲ್‌ಗಳಿಗೆ ಮೊರೆ ಹೋಗಿದ್ದರು. ಮತ್ತೆ ತಡವಾಗಿ ಭೋಜನ ವ್ಯವಸ್ಥೆ ಕಲ್ಪಿಸಿದ್ದು, ಆಯೋಗದ ಮೆನುವಿನಂತೆಯೂ ಭೋಜನ ನೀಡದೆ ಅವ್ಯವಸ್ಥೆ ಸೃಷ್ಟಿಸಿದ್ದಾರೆ.
ಈ ವಿಚಾರವಾಗಿ ಅಧಿಕಾರಿಗಳು ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಚುನಾವಣೆಗೆ ಆಯೋಗ ಕೋಟಿ ಕೋಟಿ ವ್ಯಯಿಸಿದರೂ ಸಿಬಂದಿಗೆ ಸ್ಥಳೀಯಾಡಳಿತ ಅಗತ್ಯ ವ್ಯವಸ್ಥೆ ಕಲ್ಪಿಸದಿರುವ ಬಗ್ಗೆ ಅಸಮಾಧಾನ ಹೊರಹಾಕಿದ ಘಟನೆ ಕಂಡುಬಂತು.