Advertisement

ಪೊಲೀಸ್‌ ವೃತ್ತಿ ಕೌಶಲ್ಯ ಹೆಚ್ಚಳಕ್ಕೆ ತರಬೇತಿ

04:43 PM May 09, 2017 | Team Udayavani |

ಕಲಬುರಗಿ: ಪೊಲೀಸ್‌ ಸಿಬ್ಬಂದಿಗಳಲ್ಲಿ ಕಾಲಕ್ಕೆ ತಕ್ಕಂತೆ ಅಗತ್ಯ ಸೇವಾ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಮುಂದಾಗಿದ್ದು, ಮೇ 15ರಿಂದ ಮಂಡ್ಯ ಜಿಲ್ಲೆಯ ಚೆನ್ನಪಟ್ಟಣದಲ್ಲಿ ಪುನಶ್ಚೇತನ ತರಬೇತಿ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ರೂಪಕ್‌ ಕುಮಾರ ದತ್ತಾ ತಿಳಿಸಿದರು. 

Advertisement

ಸೋಮವಾರ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಈಶಾನ್ಯ ವಲಯದ ಪರಿವೀಕ್ಷಣಾ ಪಥಸಂಚಲನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಪುನಶ್ಚೇತನ ತರಬೇತಿಯು ಸೇವಾ ಕೌಶಲ್ಯಕ್ಕೆ ಮತ್ತಷ್ಟು ಪೂರಕವಾಗಲಿದೆ ಎಂದರು. ಪಥ ಸಂಚಲನವು ಪೊಲೀಸ್‌ ಸಿಬ್ಬಂದಿಗಳಲ್ಲಿ ಶಿಸ್ತು ಬೆಳೆಸುತ್ತದೆ. 

ಹೀಗಾಗಿ ಇನ್ನು ಮುಂದೆ ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪಥಸಂಚಲನ ಹಮ್ಮಿಕೊಳ್ಳುವ ಕುರಿತಾಗಿ ಆದೇಶಿಸಲಾಗಿದೆ ಎಂದು ತಿಳಿಸಿದರು. ಇಲಾಖೆಯಲ್ಲಿ ಕೇವಲ ಹಿರಿಯ ಅಧಿಕಾರಿಗಳು ಮಾತ್ರ ತನಿಖೆ ಮಾಡುತ್ತಾರೆ. ಇದೇ ರೀತಿ ಮುಂದುವರಿಯಬಾರದು.

ಬದಲಾಗಿ ಇಲಾಖೆಯಲ್ಲಿನ ಪೇದೆ, ಮುಖ್ಯ ಪೇದೆ ಹಾಗೂ ಎಎಸ್‌ಐ ಅವರಿಗೆ ಅಪಘಾತ, ಗಾಯ, ಇತರೆ ಸಣ್ಣಪುಟ್ಟ ಪ್ರಕರಣಗಳ ತನಿಖಾ ಹೊಣೆಯನ್ನು ನೀಡಲಾಗುತ್ತದೆ. ಇದರಿಂದ ಡಿಎಸ್‌ಪಿ, ಸಿಪಿಐ, ಪಿಎಸ್‌ಐ ಅವರು ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಬೇಧಿಸಲು ಸಮಯ ಕೊಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಈಶಾನ್ಯ ವಲಯ ಪೋಲಿಸ್‌ ಮಹಾನಿರೀಕ್ಷಕ ಅಲೋಕಕುಮಾರ ಮಾತನಾಡಿ, ಪೊಲೀಸ್‌ ಇಲಾಖೆಯಲ್ಲಿ ಪಥಸಂಚಲನ ತುಂಬಾ ಮಹತ್ವದ್ದು. ಶಿಸ್ತಿನ ಇನ್ನೊಂದೇ ಹೆಸರೇ ಪೊಲೀಸ್‌ ಇಲಾಖೆಯಾಗಿದೆ ಎಂದರು. ಪಥಸಂಚಲನದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಿಎಸ್‌ಐ ಅಕ್ಕಮಹಾದೇವಿ, ಪಿಎಸ್‌ಐ ವಹೀದ್‌ ಕೋತ್ವಾಲ್‌, ಪರಶುರಾಮ ವನಜಕರ್‌ ನೇತೃತ್ವದ ತಂಡಗಳಿಗೆ ನಗದು ಬಹುಮಾನ, ಪಾರಿತೋಷಕ ವಿತರಿಸಲಾಯಿತು.

Advertisement

ಅದೇ ರೀತಿ ಈಶಾನ್ಯ ವಲಯದ ಮೂರು ಜಿಲ್ಲೆಗಳಲ್ಲಿ ಉತ್ತಮ ಕಾರ್ಯನಿರ್ವಹಣೆ, ಅಪರಾಧ ತಡೆ, ಸಂಚಾರಿ ವ್ಯವಸ್ಥೆ, ಜನಸ್ನೇಹಿ ಕಾರ್ಯ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ಡಿಜಿಪಿ ದತ್ತಾ ವಿತರಿಸಿದರು. 

ವಿಶೇಷ ಸನ್ಮಾನ: ಯುರೋಪ ದೇಶದಲ್ಲಿ ಯುರೋಪ ರಾಷ್ಟ್ರದ ಇಗರ್‌ ಹಂಗೇರಿಯಲ್ಲಿ ನಡೆದ ವರ್ಲ್ಡ್ ಇಂಟರ್‌ ಸ್ಕೂಲ್‌ ರೋಪ್‌ ಸ್ಕಿಪ್ಪಿಂಗ್‌ ಚಾಂಪಿಯನ್‌ಶಿಪ್‌-2017ರಲ್ಲಿ ಪ್ರಥಮ ಸ್ಥಾನ ಪಡೆದ ಪೊಲೀಸ್‌ ಮುಖ್ಯ ಪೇದೆ ಹಿರೇಮಾನ್‌ ಪುತ್ರ ಪವನಕುಮಾರ ರಾಠೊಡನನ್ನು ಡಿಜಿ ದತ್ತಾ ಸನ್ಮಾನಿಸಿದರು.

ಬೀದರ್‌ ಎಸ್‌ಪಿ ಪ್ರಕಾಶ ನಿಕ್ಕಂ ಸ್ವಾಗತಿಸಿದರು. ಕಲಬುರಗಿ ಎಸ್‌ಪಿ ಎನ್‌. ಶಶಿಕುಮಾರ, ಯಾದಗಿರಿ ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಹಾಜರಿದ್ದರು. ಸೇಡಂ ಸಿಪಿಐ ಪಂಚಾಕ್ಷರಿ ಸಾಲಿಮಠ, ಶಶಿಕಲಾ ಜಡೆ ನಿರೂಪಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next