ಶಿವಮೊಗ್ಗ: ಹೊಟ್ಟೆನೋವಿನಿಂದ ಬಳಲುತ್ತಿದ್ದ 35 ವರ್ಷದ ಗಂಡಾನೆಯೊಂದು(ನಾಗಣ್ಣ) ಸಾವನ್ನಪ್ಪಿರುವ ಘಟನೆ ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
2017 ಡಿಸೆಂಬರ್ 21 ರಂದು ಚನ್ನಗಿರಿ ತಾಲ್ಲೂಕಿನ ಉಬ್ರಾಣಿಯಲ್ಲಿ ಈ ಆನೆಯನ್ನು ಅಭಿಮನ್ಯು ಮತ್ತು ತಂಡದಿಂದ ಸೆರೆ ಹಿಡಿದು ಕರೆತರಲಾಗಿತ್ತು.
ಭಾರಿ ಅವಾಂತರ ಸೃಷ್ಟಿಸಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿತ್ತು. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಭಾಗದಲ್ಲಿ ಹತ್ತಾರು ದಿನ ಕಾಡಿದ್ದ ಈ ಆನೆ ನಾಲ್ವರ ಸಾವಿಗೂ ಕಾರಣವಾಗಿತ್ತು.
15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸತತ ಪರಿಶ್ರಮದಿಂದ ಈ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಯಶಸ್ವಿಯಾಗಿತ್ತು. ನಂತರ ಈ ಆನೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಕರೆತಂದು ಪಳಗಿಸಲಾಗಿತ್ತು. ಭಾರಿ ಸಿಟ್ಟು, ತೀಕ್ಷ ದಂತ ಹೊಂದಿದ್ದ ಈ ಆನೆಯು ಈಚೆಗೆ ಮಾವುತರ ಜತೆಗೆ ಬೆರೆತಿತ್ತು.
ಗುರುವಾರ ಕೂಡ ಫಿಲಂ ಶೂಟಿಂಗ್‌ವೊಂದರಲ್ಲಿ ಭಾಗವಹಿಸಿತ್ತು.
ಶುಕ್ರವಾರ ಬೆಳಗ್ಗೆಯಿಂದಲೇ ಹೊಟ್ಟೆನೋವು, ಭೇದಿಯಿಂದ ಬಳಲುತ್ತಿದ್ದ ಆನೆಗೆ ಔಷಧೋಪಚಾರ ಮಾಡಲಾಗಿತ್ತು. ಮಧ್ಯಾಹ್ನ ಎರಡು ಗಂಟೆಗೆ ಔಷಧ ನೀಡಿ ನೀರಿನ ಬಳಿಯೇ ಬಿಡಲಾಗಿತ್ತು. ಸಂಜೆ 4.30ರ ವೇಳೆಗೆ ಕೊನೆ ಉಸಿರೆಳೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಶಾರದಾ ಎಂಬ ಆನೆ ಮರಿಯೂ ಇದೇ ರೀತಿ ಹೊಟ್ಟೆನೋವಿನಿಂದ ಬಳಲಿ ಸಾವನ್ನಪ್ಪಿತ್ತು. ಪೋಸ್ಟ್ಮಾರ್ಟಮ್ ವರದಿ ಬಂದ ಮೇಲೆ ಸತ್ಯಾಂಶ ತಿಳಿಯಲಿದೆ.