ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪ್ರಾಥಮಿಕ ಹಂತದಲ್ಲಿಯೇ ಯೋಜಿತ ತರಬೇತಿ ದೊರೆಯುವುದು ಅವಶ್ಯ ಎಂದು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಅಭಿಪ್ರಾಯಪಟ್ಟರು.
ಸೋಮವಾರ ಮಣಿಪಾಲದ ಮರೇನಾ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬ್ರಿಡ್ಜ್ ಆಫ್ ನ್ಪೋರ್ಟ್ಸ್ ಸರಕಾರೇತರ ಸಂಸ್ಥೆಯ ಸಹಯೋಗದಲ್ಲಿ ಮಾಹೆಯ ಸೆಂಟರ್ ಫಾರ್ ನ್ಪೋರ್ಟ್ಸ್ ಸಾಯನ್ಸ್, ಮೆಡಿಸಿನ್ ಆ್ಯಂಡ್ ರಿಸರ್ಚ್ ವತಿಯಿಂದ ಉ.ಕ ಜಿಲ್ಲೆಯ ಸಿದ್ಧಿ ಜನಾಂಗದವರೂ ಸೇರಿದಂತೆ 18 ಮಂದಿ ಬುಡಕಟ್ಟು ಜನಾಂಗದ ಕ್ರೀಡಾಪ್ರತಿಭೆಗಳಿಗೆ ಜರಗಿದ 15 ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬುಡಕಟ್ಟು ಮಕ್ಕಳಲ್ಲಿಯೂ ಪ್ರತಿಭೆಗೆ ಕೊರತೆ ಇಲ್ಲ. ಆದರೆ ಆ ಪ್ರತಿಭೆಗೆ ಪೂರಕವಾಗಿ ವೈಜ್ಞಾನಿಕ, ವ್ಯವಸ್ಥಿತ ಮತ್ತು ಅತ್ಯಾಧುನಿಕ ರೀತಿಯ ತರಬೇತಿ ದೊರೆತರೆ ಆ ಪ್ರತಿಭೆಯಿಂದ ಸಾಧನೆ ಮಾಡಲು ಸಾಧ್ಯ. ಮಾಹೆ ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೆ ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇದರ ಒಂದು ಭಾಗವಾಗಿ ಬುಡಕಟ್ಟು ಮಕ್ಕಳಿಗೂ ಇಲ್ಲಿನ ಕ್ರೀಡಾ ಸೌಲಭ್ಯಗಳ ಮೂಲಕ ಉನ್ನತ ಮಟ್ಟದ ಕ್ರೀಡಾ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂಥ ಸೌಲಭ್ಯಗಳು ಸಾಮಾನ್ಯ ಮಕ್ಕಳಿಗೂ ದೊರೆಯುವಂತಾಗಬೇಕು ಎಂಬ ಸಾಮಾಜಿಕ ಕಾಳಜಿಯಿಂದ ಮಾಹೆ ಈ ತರಬೇತಿ ಆಯೋಜಿಸಿದೆ. ಇಲ್ಲಿ ತರಬೇತಿ ಪಡೆದ ಮಕ್ಕಳು ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಂತಾಗಲಿ ಎಂದು ಡಾ| ಬಲ್ಲಾಳ್ ಹೇಳಿದರು.
ತರಬೇತುದಾರ ರಿಜ್ವಾನ್ ಅವರು ಮಾತನಾಡಿ, ತರಬೇತಿ ಪಡೆದ ಮಕ್ಕಳ ಪೈಕಿ ರವಿಕಿರಣ್ ಸಿದ್ದಿ 400 ಮೀಟರ್ ಓಟವನ್ನು 54 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾರೆ. ಶಾಲಿನಿ ಸಿದ್ದಿ 100 ಮೀಟರ್ ಓಟವನ್ನು 11 ಸೆಕುಂಡುಗಳಲ್ಲಿ ಹಾಗೂ ಶಿಜು 5,000 ಮೀಟರನ್ನು 17 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ. ಇವರ ಗುರಿ ಮುಂದಿನ ಒಲಿಂಪಿಕ್ಸ್ ಆಗಿದೆ. ಇಲ್ಲಿ ನಾವು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನ ಸೌಲಭ್ಯ, ಪ್ರೋತ್ಸಾಹ ದೊರೆತಿದೆ ಎಂದು ಹೇಳಿದರು.
ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗ, ಮಾಹೆ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಸಹ ಕಾರ್ಯದರ್ಶಿ ಡಾ| ಶೋಭಾ, ಸಂಯೋಜಕ ಪಿಡ್ಡಿ ಡೇವಿಸ್ ಉಪಸ್ಥಿತರಿದ್ದರು. ನವನೀತ್ ಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು.